ವಾಹನ ಅಡ್ಡಗಟ್ಟಿ ಸುಲಿಗೆ: ಮತ್ತೆ ೬ ಮಂದಿ ಬಂಧನ


ಮಂಗಳೂರು, ಎ.೧೬- ನಗರದ ಮೂಡುಬಿದಿರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ ಮಾತ್ರವಲ್ಲದೆ ವಾಹನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿ ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಎಪ್ರಿಲ್ ೧ರಂದು ಪ್ರಕರಣಕ್ಕೆ ಸಂಬಂಧಿಸಿ ೯ ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಮೂಲಕ ೨೮ ಅಧಿಕೃತ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು ೧೫ ಮಂದಿಯ ಬಂಧನವಾಗಿದ್ದು, ಓರ್ವ ಪ್ರಮುಖ ಆರೋಪಿಸಿ ಸೇರಿದಂತೆ ಇನ್ನೂ ಹಲವಾರು ಮಂದಿಯ ಬಂಧನವಾಗಬೇಕಾಗಿದೆ ಎಂದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಕೇಶ್, ಅರ್ಜುನ್, ಮೋಹನ್, ಮುಹಮ್ಮದ್ ಝುಬೈರ್, ಇಬ್ರಾಹೀಂ ಲತೀಫ್ ಹಾಗೂ ಬೋಳಿಯಾರ್ ಮನ್ಸೂರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದರು. ಬಂಧಿತ ಎಲ್ಲಾ ಆರೋಪಿಗಳ ವಿರುದ್ಧ ಮಂಗಳೂರು ನಗರದಲ್ಲಿ ೭, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ೮ ಪ್ರಕರಣಗಳು, ಹಾಸನ ಜಿಲ್ಲೆಯಲ್ಲಿ ೨, ಚಿಕ್ಕಮಗಳೂರು ೩, ಕೊಡಗು ೫, ಉಡುಪಿ ೨ ಹಾಗೂ ಬೆಂಗಳೂರು ನಗರದಲ್ಲಿ ೧ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಕೃತ್ಯವೆಸಗಲು ವಾಹನ, ಹಣಕಾಸಿನ ನೆರವು ನೀಡಿರುವವರು, ಸಂಚು ರೂಪಿಸಲು ಭಾಗಿಯಾದವರು, ತಲೆಮರೆಸಿಕೊಳ್ಳಲು ಆಶ್ರಯ ನೀಡಿದವರನ್ನು ಹೆಚ್ಚಿನ ತನಿಖೆಯ ಮೂಲಕ ದಸ್ತಗಿರಿ ಮಾಡಲಾಗುವುದು ಎಂದು ಅವರು ಹೇಳಿದರು. ಬಂಧಿತರಿಂದ ಕಾರು, ಮೊಬೈಲ್ ಫೋನ್ ಗಳು, ಏರ್‌ಗನ್, ಚಿನ್ನ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ೪೧.೮೨ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು. ಬಂಧಿತ ಆರೋಪಿಗಳ ತಂಡ ಹಾಸನ ಅರೆಹೊಳ್ಳೆಯಲ್ಲಿ ಆ?ಯಕ್ಸಿಸ್ ಬ್ಯಾಂಕ್ ದರೋಡೆಗೆ ಯತ್ನಿಸಿದ್ದು, ಅಲರಾಂ ಕಾರಣದಿಂದ ದರೋಡೆ ಯತ್ನ ವಿಫಲಗೊಂಡಿತ್ತು. ಲಾಕ್ ಆಗಿರುವ ಮನೆಗಳನ್ನು ಕಳ್ಳತನ, ದರೋಡೆಗೆ ಟಾರ್ಗೆಟ್ ಮಾಡುತ್ತಿದ್ದ ಗುಂಪು, ಮನೆಯಲ್ಲಿ ದುಷ್ಕೃತ್ಯದ ಸಂದರ್ಭ ಯಾರಾದರೂ ಎದುರಾದರೆ ಹಲ್ಲೆ, ಅಥವಾ ಹತ್ಯೆಗೂ ಮುಂದಾಗುತ್ತಿತ್ತು. ತಮ್ಮ ಕೃತ್ಯಗಳಿಗೆ ವಾಹನಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ತಂಡ, ಬೇರೆ ಜಿಲ್ಲೆ ಅಥವಾ ಊರುಗಳಲ್ಲಿ ಆ ವಾಹನ ಕಳವಾಗಿದೆ ಎಂದು ಪೊಲೀಸ್ ಠಾಣೆಗಳಲ್ಲಿ ದೂರು ನೀಡುತ್ತಿದ್ದ ಪ್ರಕರಣವೂ ಇದೆ. ಬಂಧಿತ ಝುಬೈರ್ ವಿರುದ್ಧ ೨೫ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಲತೀಫ್ ಹಾಗೂ ರಾಕೇಶ್ ವಿರುದ್ಧವೂ ತಲಾ ೫ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮನ್ಸೂರ್ ರೌಡಿಯಾಗಿದ್ದು, ಯಾವುದೇ ಕೃತ್ಯಗಳಿಗೆ ಸಂಬಂಧಿಸಿ ಜೈಲು ಪಾಲಾಗುತ್ತಿದ್ದ ಸಂದರ್ಭ ಅಲ್ಲಿದ್ದುಕೊಂಡು ದರೋಡೆ, ಕಳ್ಳತನ ಪಿತೂರಿ, ಸಂಚು ಕೂಡಾ ರೂಪಿಸುತ್ತಿತ್ತು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.