ವಾಹನಗಳ ಸಂಖ್ಯೆ ಹೆಚ್ಚಳ : ಸಿಎಂ ಕಳವಳ

church street


ಬೆಂಗಳೂರು.ನ.೭- ಬೆಂಗಳೂರು ನಗರದಲ್ಲಿ ದಿನದಿನಕ್ಕೂ ಹೆಚ್ಚುತ್ತಿರುವ ವಾಹನಗಳ ಸಂಚಾರದಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ೮೦ ಲಕ್ಷ ದಾಟಿದೆ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಹೇಳಿದರು.
ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಶುದ್ಧ ಗಾಳಿ ರಸ್ತೆ (ಕ್ಲೀನ್ ಏರ್ ಸ್ಟ್ರೀಟ್) ಉದ್ಘಾಟಿಸಿ ಮಾತನಾಡಿದ ಅವರು,
ನಾಗರಿಕರಿಗೆ ಶುದ್ಧ ಗಾಳಿ ಸಿಗುವಂತಹ ಕ್ಲೀನ್ ಏರ್ ಸ್ಟ್ರೀಟ್ ಯೋಜನೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದೇವೆ. ಇಡೀ ದೇಶದಲ್ಲೇ ಈ ರೀತಿಯ ಯೋಜನೆ ಜಾರಿ ಮಾಡಿದ ಕೀರ್ತಿ ನಮ್ಮದು ಎಂದರು.
ಪರಿಸರ ಸಂರಕ್ಷಣೆಗೆ ಯುವ ಜನತೆ ಕೈಜೋಡಿಸುತ್ತಿರುವುದು ಆಶಾವಾದ ಮೂಡಿಸಿದೆ. ಶುದ್ಧಗಾಳಿ, ನೀರು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಹೇಳಿದರು.
ನಗರ ಭೂಸಾರಿಗೆ ನಿರ್ದೇಶನಾಲಯ ಹಾಗೂ ಬ್ರಿಟನ್ ಸಹಭಾಗಿತ್ವದಲ್ಲಿ ಈ ಕ್ಲೀನ್ ಏರ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಂತೆ ವಾರಾಂತ್ಯದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದರು. ಮಾಲಿನ್ಯ ತಡೆಗಟ್ಟಲು ಈ ಯೋಜನೆ ನೆರವಾಗಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪ್ರತಿ ವಾರಾಂತ್ಯದಲ್ಲಿ (ಶನಿವಾರ-ಭಾನುವಾರ) ಎರಡು ದಿನಗಳ ಕಾಲ ವಾಹನ ಸಂಚಾರಕ್ಕೆ ಅನುಮತಿ ಇರುವುದಿಲ್ಲ.
ಎಲೆಕ್ಟ್ರಾನಿಕ್ ವಾಹನಗಳಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗುವುದು ಎಂದರು.
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯೋಗ ನಡೆದಿದೆ. ಇದರಿಂದ ರಸ್ತೆಯಲ್ಲಿ ಓಡಾಡುವವರಿಗೆ ಶುದ್ಧ ಗಾಳಿ ಸಿಗುತ್ತದೆ ಎಂದರು.
ಇಂದಿನಿಂದ ಫೆ. ೨೫ ರವರೆಗೆ ಈ ಯೋಜನೆ ಚರ್ಚ್ ಸ್ಟ್ರೀಟ್‌ನಲ್ಲಿ ಜಾರಿಯಲ್ಲಿರುತ್ತದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನದಲ್ಲಿ ಕುಳಿತು ವಾಹನ ಚಲಾಯಿಸಿದರು. ಈ ಸಂದರ್ಭದಲ್ಲಿ ಶಾಸಕ ಹ್ಯಾರಿಸ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.