ವಾಹನಗಳ ತೆರಿಗೆ ಪಾವತಿ ಮೇ 31 ರವರೆಗೆ ವಿಸ್ತರಣೆ

ಬೆಂಗಳೂರು, ಏ. ೩೦- ರಾಜ್ಯದ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಒಳ್ಳೆಯ ಸುದ್ದಿ ನೀಡಿದ್ದು, ವಾಹನಗಳ ತೆರಿಗೆ ಪಾವತಿ ಅವಧಿಯನ್ನು ಮೇ ೩೧ರ ವರೆಗೂ ವಿಸ್ತರಿಸಿದೆ.
ಈ ಸಂಬಂಧ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣಸವದಿ ಅವರು, ಕೊರೊನಾ ೨ನೇ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ನಿಯಮಗಳನ್ನು ಸಡಿಲಗೊಳಿಸಿ ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಉಳಿದ ಎಲ್ಲ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಅನ್ವಯಿಸುವಂತೆ ತೆರಿಗೆ ಪಾವತಿ ಅವಧಿಯನ್ನು ಮೇ ೩೧ ರವರೆಗೆ ದಂಡ ರಹಿತವಾಗಿ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.
ಈ ಮೊದಲು ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಏಪ್ರಿಲ್ ೩೦ರ ವರೆಗೂ ಅವಕಾಶ ನೀಡಲಾಗಿತ್ತು. ಈ ಅವಧಿಯನ್ನು ಮತ್ತು ಮೇ ೧೫ ರೊಳಗೆ ಪಾವತಿಸಬೇಕಾಗಿರುವ ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಮೇ ೩೧ರ ವರೆಗೂ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.