ವಾಸ್ತವ ಅರಿತು ಬದುಕು ಕಟ್ಟಿಕೊಳ್ಳಿ-ಡಿವೈಎಸ್ಪಿ ರಂಗಪ್ಪ

ವಿಜಯಪುರ, ಸೆ. ೧೭- ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಡ್ರಗ್ಸ್ ಮಾಫಿಯಾವನ್ನು ಬೇರು ಸಹಿತ ಕಿತ್ತು ಹಾಕಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಮಾಜದ ಪ್ರತಿಯೊಬ್ಬರೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಡಿವೈಎಸ್ಪಿ ಟಿ.ರಂಗಪ್ಪ ಮನವಿ ಮಾಡಿದರು.
ಇಲ್ಲಿನ ಪೋಲೀಸ್ ಠಾಣೆಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ವರದಿಗಾರರೊಂದಿಗೆ ಮಾತನಾಡಿದ ಅವರು, ಮಾದಕ ವಸ್ತುಗಳು ಸಮಾಜದ ಮೇಲೆ ಹಲವಾರು ರೀತಿಯ ದುಷ್ಪರಿಣಾಮ ಬೀರುತ್ತವೆ. ೧೦ ವರ್ಷಗಳಲ್ಲಿ ಗಾಂಜಾ ಪ್ರಕರಣಗಳಲ್ಲಿ ದಾಖಲಾಗಿರುವ ಕೇಸುಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಗ್ರಾಮ ಮಟ್ಟದಲ್ಲಿ ರೈತರಲ್ಲೂ ಅರಿವು ಮೂಡಿಸಲಾಗಿದೆ. ಗಡಿಗಳಲ್ಲಿ ಅಂತರರಾಜ್ಯ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ. ಹಿಂದೂಪುರ, ಅನಂತಪುರದ ಕಡೆಯಿಂದ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಶ್ವಾನದಳದಿಂದ ತಪಾಸಣೆ ಮಾಡಿಸುತ್ತಿದ್ದೇವೆ. ಗಾಂಜಾ ಮಾರಾಟಗಾರರಿಂದ ಎಲ್ಲಿಂದ ಹೇಗೆ ಬರುತ್ತೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ರೈಡ್ ಮಾಡಿ ಕೇಸು ಮಾಡಿದ್ದೇವೆ.
ಇದೊಂದು ವಾಸಿಯಾಗದ ಕಾಯಿಲೆಯಾಗಿದೆ. ಕುಟುಂಬ, ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತದೆ. ಇದರ ಗಂಭೀರತೆಯನ್ನು ಅರಿತುಕೊಂಡು ಕುಟುಂಬದ ಸದಸ್ಯರು ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು, ಸೆಲೆಬ್ರೆಟಿಗಳನ್ನು ಅನುರಿಸದೇ ಜೀವನದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ಗುಂಗಿನಿಂದ ಹೊರಬನ್ನಿ, ಸಾಮಾಜಿಕ ಜಾಲತಾಣಗಳ ಉಪಯೋಗ ಕಡಿಮೆ ಮಾಡಿ, ಪಾರ್ಟಿಗಳನ್ನು ಆಯೋಜನೆ ಮಾಡುವಾಗ ಯುವಕರಿಗೆ ಮಾತ್ರವಲ್ಲದೇ ಕುಟುಂಬಸ್ಥರೆಲ್ಲರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಆಗ ಇಂತಹ ಚಟಗಳಿಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ ಎಂದರು. ಸರ್ಕಲ್ ಇನ್ ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಮಾತನಾಡಿದರು.