ವಾಸ್ತವಿಕತೆ ಅರಿಯದೆ ಸುದ್ದಿ ಪ್ರಕಟ: ನಂಬಿಕೆ ಕುಸಿತ

ತುಮಕೂರು, ನ. ೯- ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿನ ಮಾಹಿತಿ ಮತ್ತು ಸುದ್ದಿಗಳ ಮೂಲ, ವಾಸ್ತವಿಕತೆ, ವಿಶ್ವಾಸಾರ್ಹತೆಯನ್ನು ಅರಿತುಕೊಳ್ಳದೇ ಅವುಗಳನ್ನು ಪ್ರಕಟಿಸುತ್ತಿರುವುದರಿಂದ ಸಮಾಜದಲ್ಲಿ ಮಾಧ್ಯಮಗಳ ಬಗ್ಗೆ ನಂಬಿಕೆ ಕುಸಿಯುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಂ.ಎಸ್. ಸಪ್ನ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಇಂಡಿಯನ್ ಮೀಡಿಯಾ ಲಿಟ್ರೆಸಿ ನೆಟ್‌ವರ್ಕ್ಸ್ ಸಂಸ್ಥೆ (ಫ್ಯಾಕ್ಟ್‌ಶಾಲಾ) ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ನಕಲಿ ಸುದ್ದಿಗಳ ಪರಾಮರ್ಶೆ ಕುರಿತು ಆನ್‌ಲೈನ್ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓದುವುದು, ನೋಡುವುದು ಮತ್ತು ಕೇಳುವುದೆಲ್ಲವನ್ನು ಸುದ್ದಿ ಮಾಡಲಾಗದು. ಅದರಲ್ಲಿ ವಾಸ್ತವಿಕತೆ ಮತ್ತು ವಿಶ್ವಾರ್ಹತೆಗಳಿದ್ದಾಗ ಮಾತ್ರ ಸಮಾಜಕ್ಕೆ ಉತ್ತಮ ಸುದ್ದಿಯಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿಗಳು ಹೇಗೆ ನಕಲಿಯಾಗುತ್ತಿವೆ ಮತ್ತು ಹೇಗೆ ವಿಕೃತಗೊಳಿಸಲಾಗುತ್ತಿದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ ಅವರು, ಆಧುನಿಕ ಕಾಲಘಟ್ಟದಲ್ಲಿಯೂ ಮಾಧ್ಯಮಗಳಲ್ಲಿ ಸುದ್ದಿಯ ಸತ್ಯಾಂಶ ತಿಳಿಯದೆ ಸುದ್ದಿಗಳನ್ನು ಬಿತ್ತರಿಸುವುದನ್ನು ನಾವು ಕಾಣುತ್ತಿದ್ದೇವೆ. ಈ ಪ್ರವೃತ್ತ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಮಿತಿ ಮೀರಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾಹಿತಿ-ಸುದ್ದಿಗಳನ್ನು ತಿರುಚಲಾಗುತ್ತಿದೆ. ಈ ಬಗ್ಗೆ ಜಾಗೃತಿ-ಅರಿವು ಹೆಚ್ಚಾಗಬೇಕು. ಸಮಾಜಕ್ಕೆ ಮಾರಕವಾಗುವ ಮಾಹಿತಿಯನ್ನು ಪ್ರಸಾರ ಮಾಡುವಾಗವುದು ಅದರ ಪೂರ್ವಾಪರಗಳನ್ನು ಪತ್ತೆ ಹಚ್ಚುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ಪತ್ರಿಕೋದ್ಯಮ ಉತ್ತರದಾಯಿತ್ವವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಂತರ್ಜಾಲ ತಾಣ ಮಾಧ್ಯಮಗಳಲ್ಲಿ ಮಿತಿ ಮೀರಿದ ವಿಷಯಗಳು, ಛಾಯಾಚಿತ್ರಗಳು, ದೃಶ್ಯ ಮತ್ತು ಧ್ವನಿ ತುಣುಕುಗಳು ಮುಕ್ತವಾಗಿ ಲಭ್ಯವಾಗುತ್ತಿವೆ. ಇವುಗಳಲ್ಲಿ ನೈಜ ಅಂಶಗಳನ್ನು ಹೆಕ್ಕಿ ತೆಗೆಯುವಲ್ಲಿ ವಿಫಲರಾಗುತ್ತಿರುವುದರಿಂದ ಸಮಾಜದಲ್ಲಿ ಶಾಂತಿಭಂಗ ಉಂಟಾಗುತ್ತಿರುವ, ಮತೀಯ ಗಲಭೆ, ಸಮುದಾಯ ಸಂಘರ್ಷ, ಆತಂಕಮಯ ವಾತಾವರಣ ಏರ್ಪಡುತ್ತಿರುವುದನ್ನು ಕಾಣಬಹುದಾಗಿದೆ. ಕೊರೊನಾ-೧೯ ಸೋಂಕಿನ ಸಂದರ್ಭದಲ್ಲಿಯೂ ಇದರ ಪರಿಣಾಮ ಇನ್ನಷ್ಟು ಹೆಚ್ಚಾದ್ದರಿಂದ ಜನರ ಮಾನಸಿಕ ಸ್ಥಿತಿಯಲ್ಲಿ ಬರೀ ಏರು-ಪೇರಾಗಿದ್ದನ್ನು ನಾವು ಕಂಡಿದ್ದೇವೆ ಎಂದರು.
ಜಾಲತಾಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಜನರ ಸಾವಿಗೂ ಕಾರಣವಾಗುವ ಹಂತದಲ್ಲಿ ನಾವಿದ್ದೇವೆ. ಆದ್ದರಿಂದ ಈ ಮಾಧ್ಯಮಗಳ ಮೇಲೆ ನಿಯಂತ್ರಣ ತರುವ ಅಗತ್ಯತೆ ಮತ್ತು ಅನಿವಾರ್ಯತೆ ಇಂದಿನದಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಾರ್ವಜನಿಕರು ಸುದ್ದಿ-ಮಾಹಿತಿಗಳ ವಾಸ್ತವಿಕತೆ ಅರಿಯದೆ ಅದನ್ನು ಇನ್ನೊಬ್ಬರಿಗೆ ರವಾನಿಸುವ ಪ್ರವೃತ್ತಿ ಬಿಡಬೇಕು ಎಂದು ಡಾ.ಎಂ.ಎಸ್. ಸಪ್ನ ಕರೆ ನೀಡಿದರು.
ಗೂಗಲ್ ಮೀಟ್ ಮೂಲಕ ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ. ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ.ಯು.ಡಿ.ನಾಗೇಂದ್ರ, ಜ್ಯೋತಿ ಸಿ, ಶ್ವೇತ ಎಂ.ಪಿ. ವಿಜಯ್ ಕೃಷ್ಣ, ರೂಪ ಕೆ., ಮನೋಜಕುಮಾರಿ ಬಿ., ಪತ್ರಕರ್ತರಾದ ಗಂಗಾವತಿ ವಸಿಗೇರಪ್ಪ ಸೇರಿದಂತೆ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.