ವಾಲ್ಮೀಕಿ ಸಮುದಾಯ ಭವನ ಕೂಡಲೇ ಆರಂಭಿಸಲು ಮನವಿ

ಬೀದರ್ ನ. 20: ಬೀದರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ಕಾಮಗಾರಿ ಕೂಡಲೇ ಪ್ರಾರಂಭಿಸಿ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಬುಧವಾರ ಸಮಾಜ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸೂರ್ಯಕಾಂತ ನಾಗಮಾರಪಳ್ಳಿಯವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಬೀದರ ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಟೋಕರೆ ಕೋಳಿ ಸಮುದಾಯದ ಜನ ಅತಿಹಿಂದುಳಿದಿದ್ದಾರೆ. ಅಲ್ಲದೇ ಈ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ವಂಚಿತರಾಗಿದ್ದಾರೆ. ಈ ಸಮುದಾಯದವರು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸಭೆ-ಸಮಾರಂಭ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳು ನಡೆಸಲು ಸಮುದಾಯ ಭವನಗಳಿಲ್ಲ. ಈ ಸಮಾಜವನ್ನು ಕಳೆದ ಹಲವು ವರ್ಷಗಳಿಂದ ಹಿಂದಿನ ಸರ್ಕಾರಗಳು ಕಡೆಗಣಿಸುತ್ತ ಬಂದಿವೆ. ದಯಾಮಾಡಿ ತಾವೂಗಳು ಈ ಹಿಂದುಳಿದ ಟೋಕರೆ ಕೋಳಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೂಡಲೇ ಬೀದರ ನಗರದ ಚಿಕ್ಕಪೇಟ್ ಸಮಿಪ ಬಂಜಾರಾ ಸಮಾಜಕ್ಕೆ ಸರ್ಕಾರದಿಂದ ನೀಡಿರುವ ಭೂಮಿಯ ಸಮಿಪವೇ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ 20 ಗುಂಟೆ ಭೂಮಿ ನೀಡಿದ ಸ್ಥಳದಲ್ಲಿ ಭವನದ ಕಟ್ಟಡ ನಿರ್ಮಾಣ ಮಾಡಲು 1 ಕೋಟಿ ರೂಪಾಯಿ ಮಂಜೂರು ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ ಬೌದ್ಧೆ, ರಾಜ್ಯ ಮಾದಿಗ ದಂಡೋರಾ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಫರ್ನಾಂಡಿಸ್ ಹಿಪ್ಪಳಗಾಂವ್ ಇದ್ದರು.