ವಾಲ್ಮೀಕಿ ಸಮುದಾಯ ಬೆಂಬಲ ಹಾಸ್ಯಸ್ಪದ – ಸುರೇಶನಾಯಕ

ಕೋಲಾರ,ಏ. ೧- ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವಾಲ್ಮೀಕಿ ಸಮುದಾಯದ ಸಮಾವೇಶವನ್ನು ಚಿಂತಾಮಣಿ ರಸ್ತೆಯ ಮ್ಯಾಂಗೋ ಮಂಡಿಯಲ್ಲಿ ಶಾಸಕರಾದ ರಮೇಶ್‌ಕುಮಾರ್ ನೇತೃತ್ವದಲ್ಲಿ ಮಾ ೨೮ ರಂದು ಕಾರ್ಯಕ್ರಮ ಆಯೋಜನೆ ಮಾಡಿ ಕೇವಲ ಕೆಲವೇ ಕೆಲವು ಕಾಂಗ್ರೆಸ್‌ನ ಕಾರ್ಯಕರ್ತರನ್ನು ಇಟ್ಟುಕೊಂಡು ಇಡೀ ವಾಲ್ಮೀಕಿ ಸಮುದಾಯ ಬೆಂಬಲ ಘೋಷಣೆ ಮಾಡಿದ್ದಾರೆ ಎಂದು ಹೇಳಿರುವುದು ಹಾಸ್ಯಾಸ್ಪದ ಎಂದು ಭಾರತೀಯ ಜನತಾಪಾರ್ಟಿ ಎಸ್.ಟಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಎನ್.ಸುರೇಶನಾಯಕ ಕುಟುಕಿದ್ದಾರೆ.
ಇಡೀ ದೇಶದಲ್ಲಿ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಸಮುದಾಯ ಬಿಜೆಪಿ ಜೊತೆಗಿದ್ದು, ಹಲವು ದಶಕಗಳಿಂದ ಸಮುದಾಯ ಎದುರಿಸುತ್ತಿರುವ ಮೀಸಲಾತಿ ಹೆಚ್ಚಳ ಹೋರಾಟ, ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಜಾರಿ ಮಾಡಿ ಮೀಸಲಾತಿಯನ್ನು ಶೇ. ೩ ೧/೫ ರಿಂದ ಶೇ. ೭% ಹೆಚ್ಚಳ ಮಾಡಿದ್ದು, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೨೮೦೦೦ ವಾಲ್ಮೀಕಿ ಸಮುದಾಯದವರಿದ್ದು, ಕೇವಲ ಕೆಲವು ಕಾರ್ಯಕರ್ತರನ್ನು ಸೇರಿಸಿ ಇಡೀ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಎಂದು ಘೋಷಣೆ ಮಾಡಿಸಿಕೊಂಡು ಸಮುದಾಯಕ್ಕೆ ಅಪಮಾನ ಮಾಡಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಬೇಸರಿಸಿದ್ದಾರೆ.
ಇಡೀ ದೇಶದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ. ಕೇವಲ ಮತ ಬ್ಯಾಂಕ್ ಮಾಡಿಕೊಂಡಿತ್ತು. ಆದರೆ ಭಾರತೀಯ ಜನತಾ ಪಾರ್ಟಿ ವಾಲ್ಮೀಕಿ ಸಮುದಾಯದ ಪರವಾಗಿದ್ದು, ಹತ್ತಾರು ಯೋಜನೆಗಳನ್ನು ಸಮುದಾಯದ ಕಲ್ಯಾಣಕ್ಕಾಗಿ ಜಾರಿಗೆ ತಂದಿದೆ.
ಪರಿಶಿಷ್ಟ ಪಂಗಡದ ಒಬ್ಬ ಹೆಣ್ಣು ಮಗಳನ್ನು ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದು ಬಿಜೆಪಿ ಪಕ್ಷ. ಕಳೆದ ೧೦ ವರ್ಷಗಳಿಂದ ಪರಿಶಿಷ್ಟ ಪಂಗಡ, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಒಂದೇ ಒಂದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್‌ವೆಲ್ ಕೊರೆಸಲು ಅವಕಾಶ ನೀಡದ ಶಾಸಕರಿಗೆ ಈಗ ಸಮುದಾಯದ ಮೇಲೆ ಎಲ್ಲಿಲ್ಲದ ಪ್ರೀತಿ ಹುಟ್ಟಿದೆ. ಇಷ್ಟು ದಿನ ಇಲ್ಲದ ಪ್ರೀತಿ, ಮಮಕಾರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹುಟ್ಟಿಕೊಂಡಿರುವುದು ರಾಜಕೀಯ ಗಿಮಕ್ ಅಲ್ಲವೇ? ವಾಲ್ಮೀಕಿ ಸಮುದಾಯದ ಮತದಾರರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬುದ್ಧೀವಂತರಾಗಿದ್ದು, ಪ್ರಜ್ಞಾವಂತರಾಗಿದ್ದು, ಎಲ್ಲವೂ ಅವಲೋಕನ ಮಾಡಿ ಮತ ಚಲಾಯಿಸಲಿದ್ದಾರೆ.
ಇಡೀ ರಾಜ್ಯಾದ್ಯಂತ ಹರಿದು ಹಂಚಿ ಹೋಗಿದ್ದ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ವಾಲ್ಮೀಕಿ ಜಯಂತಿ ಆಚರಣೆ ಜಾರಿಗೆ ತಂದಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಈ ದಿನ ವಾಲ್ಮೀಕಿ ಸಮುದಾಯಕ್ಕೆ ಏನೆಲ್ಲಾ ಸೌಲಭ್ಯಗಳು ಸಿಗುತ್ತಿವೆಯೋ ಆ ಎಲ್ಲಾ ಸೌಲಭ್ಯಗಳನ್ನು ಕೊಟ್ಟಿದ್ದು ಬಿಜೆಪಿ ಪಕ್ಷ ಎಂಬುದು ಜಗತ್ಜಾಹೀರವಾಗಿದೆ. ಹಾಗಾಗಿ ವಾಲ್ಮೀಕಿ ಸಮುದಾಯದ ಸಂಪೂರ್ಣ ಬೆಂಬಲವನ್ನು ಬಿಜೆಪಿ ಪಕ್ಷಕ್ಕೆ ಘೋಷಿಸಲಾಗಿದೆ.
ವಾಲ್ಮೀಕಿ ಸಮುದಾಯವನ್ನು ಯಾರಿಗೂ ಗುತ್ತಿಗೆ ನೀಡಿಲ್ಲ. ಒಂದು ವೇಳೆ ಆ ಪ್ರಯತ್ನ ಮಾಡಿದರೆ ಅವರಿಗೆ ನಿರಾಸೆ ಕಾದಿದೆ. ಒಂದು ವೇಳೆ ಅಂತಹ ಸಂದರ್ಭ ಬಂದಿದ್ದೇ ಆದಲ್ಲಿ ಸಮುದಾಯದ ಗುರುಗಳ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.