ವಾಲ್ಮೀಕಿ ರಾಮಾಯಣ ಪಠ್ಯದಲ್ಲಿ ಅಳವಡಿಕೆ ಸೂಕ್ತ

ಕೋಲಾರ,ನ.೨:ವಾಲ್ಮೀಕಿ ರಚಿಸಿದ ರಾಮಾಯಣದ ಮೌಲ್ಯಗಳನ್ನುಕಾಪಾಡಿಕೊಂಡು ಶಿಕ್ಷಣದಲ್ಲಿ ಅಳವಡಿಸಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿದಾಗ ಸಮಾಜಕ್ಕೆ ಉತ್ತಮವಾದ ಮಾರ್ಗದರ್ಶನ ಸಿಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅಭಿಪ್ರಾಯ ಪಟ್ಟರು.
ಜಿಲ್ಲಾ ಭಾರತ ಸೇವಾದಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಏಕತಾ ದಿನಾಚರಣೆ ಸರ್ಧಾರ್ ವಲ್ಲಭ ಬಾಯ್ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳು ಅವನತಿ ಹೊಂದುತ್ತಿರುವ ದಿನಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಪ್ರಸ್ತುತವಾಗಿದ್ದು, ಅವರು ರಚಿಸಿರುವ ರಾಮಾಯಣ ಕೃತಿ ಮೂಲಕ ಪ್ರತಿಪಾದಿಸಿದ ಮೌಲ್ಯಗಳನ್ನು ಸಮಾಜದಲ್ಲಿ ಪುನರ್ ಪ್ರತಿಷ್ಟಾಪಿಸುವುದು ಪ್ರಸ್ತುತ ಅನಿವಾರ್ಯವಾಗಿದೆ ಎಂದರು.
ಕೊರೊನಾ ಕಾಲಘಟ್ಟದಲ್ಲಿ ಮನೆ ಮನಗಳನ್ನು ಸ್ವಚ್ಛವಾಗಿಟ್ಟುಕೊಂಡು ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವ ಮೂಲಕ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮಾಯಣ ಕೇವಲ ಹಿಂದುಗಳ ಧರ್ಮಗ್ರಂಥ ಮಾತ್ರವಲ್ಲ, ಮಾನವರ ನಡುವಿನ ಸಂಬಂಧಗಳ ಮೌಲ್ಯಗಳನ್ನು ಪ್ರತಿಪಾದಿಸುವ ಗ್ರಂಥವಾಗಿದ್ದು, ಇಡೀ ಜಗತ್ತಿನ ಜನ ಸಮುದಾಯದ ಗ್ರಂಥವಾಗಿದೆಯೆಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ ಮಾತನಾಡಿ, ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭ ಬಾಯ್ ಪಟೇಲ್ ಅವರ ೧೪೫ ನೇ ಜಯಂತಿಯನ್ನು ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜಾತಿ ಪಂಗಡ, ರಾಜ್ಯಗಳ ಗಡಿ ಮೀರಿ ಭಾರತೀಯರು ಒಂದಾಗಬೇಕೆಂಬ ಸಂದೇಶವನ್ನು ಸಾರಿದರೆಂದರು.
ಬಿಇಒ ಕಚೇರಿ ಅಧೀಕ್ಷಕ ಗಿರೀಶ್, ವ್ಯವಸ್ಥಾಪಕ ಮುನಿಸ್ವಾಮಿಗೌಡ, ಬಿಆರ್‌ಪಿ ತಿಮ್ಮಸಂದ್ರ ನಾಗರಾಜ್, ರಿಯಾಜ್, ಭಾರತ ಸೇವಾದಳ ಪದಾಧಿಕಾರಿ ಸಂಪತ್‌ಕುಮಾರ್, ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಇದ್ದರು,