ವಾಲ್ಮೀಕಿ ಮಹರ್ಷಿಗಳು ರಾಮಾಯಣ ಗ್ರಂಥವನ್ನು ರಚಿಸಿ ಮನುಕುಲಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ

ನವಲಗುಂದ,ಅ29 : ವಾಲ್ಮೀಕಿ ಮಹರ್ಷಿಗಳು ಸರ್ವರ ಹಿತವನ್ನು ಬಯಸುವ ಮೂಲಕ ಸತ್ಯ, ನ್ಯಾಯ ನೀತಿ, ಧರ್ಮ ಮತ್ತು ಒಳಿತು ಕೆಡಕುಗಳ ನಡುವಿನ ವ್ಯತ್ಯಾಸವನ್ನು ಅರ್ಥೈಸುವಂತಹ ರಾಮಾಯಣ ಮಹಾಗ್ರಂಥವನ್ನು ರಚಿಸಿ ಮನುಕುಲಕ್ಕೆ ಮರೆಯಲಾಗದ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3ರಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಾಮಾಯಣ ಕೇವಲ ಒಂದು ಗ್ರಂಥವಾಗಿರದೇ ಸರ್ವ ಜನಾಂಗವನ್ನು ಪ್ರತಿಬಿಂಬಿಸುವಂತಹ ಜ್ಞಾನದ ಜ್ಯೋತಿಯಾಗಿದೆ, ವಾಲ್ಮೀಕಿಯವರು ಶ್ರೀ ರಾಮ ಪ್ರಭುಗಳ ಆದರ್ಶಮಯ ಜೀವನವನ್ನು ರಾಮಾಯಣ ಗ್ರಂಥದಲ್ಲಿ ಸವಿಸ್ತಾರವಾಗಿ ಬರೆದು ಈ ನಾಡಿಗೆ ರಾಮಾಯಣ ಎನ್ನುವ ಪವಿತ್ರ ಗ್ರಂಥವನ್ನು ನೀಡಿದ್ದಾರೆ,
ಅಂತಹ ಮಹರ್ಷಿಗಳ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುವುದರ ಮೂಲಕ ಅವರ ಕೃಪೆಗೆ ನಾವೆಲ್ಲರು ಪಾತ್ರರಾಗಬೇಕೆಂದು ತಿಳಿಸಿದರು.
ನಿವೃತ್ತ ಶಿಕ್ಷಕರಾದ ಎನ್.ಎನ್.ಹಾಲಿಗೇರಿ ಮಾತನಾಡಿ ರಾಮಾಯಣವು ಪ್ರತಿಯೊಬ್ಬರು ಪರಾಯಣ ಮಾಡುವಂತಹ ಮಹಾ ಗ್ರಂಥವಾಗಿದೆ. ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಈ ಕಾವ್ಯ ಶ್ರೀ ರಾಮನ ಮಕ್ಕಳಾದ ಲವ-ಕುಶರಿಂದ ಜಗತ್ತಿನಾದ್ಯಂತ ಪ್ರಚಲಿತವಾಯಿತು. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮಾಯಣದ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು, ಮನುಕುಲಕ್ಕೇ ದಾರಿದೀಪವಾಗುವುದರ ಮೂಲಕ ಜಗತ್ತಿಗೆ ವಾಲ್ಮೀಕಿ ಮಹರ್ಷಿಯವರು ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಸ್. ಎಸ್. ಜೋಶಿ ನಿವೃತ್ತ ಶಿಕ್ಷಕರಾದ ಎನ್. ಎನ್.ಹಾಲಿಗೇರಿ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಅಡಿವೆಪ್ಪ ಶಿರಸಂಗಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವೀರಣ್ಣ ಶಿರೋಳ, ಸದಸ್ಯರಾದ ಮಹಮ್ಮದ ತಾಜುದ್ದೀನ ಹುನಗುಂದ, ಮಹಿಳಾ ಸದಸ್ಯಣಿಯರಾದ ಅನ್ನಪೂರ್ಣ ದೊಡ್ಡಮನಿ, ಬಸಮ್ಮ ಚಿಕ್ಕಣ್ಣವರ, ಸಹ ಶಿಕ್ಷಕರಾದ ಆರ್.ಬಿ.ಹಳ್ಳಿಕೇರಿ, ಟಿ.ಎಪ್.ಮರೆಪ್ಪಗೌಡ್ರ, ಎಂ.ಸಿ.ಚನ್ನಪ್ಪಗೌಡ್ರ, ಶಿವಯೋಗಿ ಜಂಗಣ್ಣವರ, ಎ.ಎಸ್.ಹುಂಡೆಕಾರ,
ಕೆ.ಎಚ್.ಕರೆಭರಮಣ್ಣವರ, ಕೆ.ಕೆ.ಮಂಕಣಿ, ಕೆ.ಎಫ್.ಬಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.