ವಾಲ್ಮೀಕಿ ನಿಗಮದ ಅಕ್ರಮ ಸಮಗ್ರ ತನಿಖೆಗೆ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.31:- ಶ್ರೀಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಸುಮಾರು 187 ಕೋಟಿ ರೂ. ದುರುಪಯೋಗ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ನಗರದ ಜಿಲ್ಲಾ ಪಂಚಾಯಿತ್ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿತು.
ವೇದಿಕೆಯ ಅಧ್ಯಕ್ಷ ಪ್ರಭಾಕರ್ ಹುಣಸೂರು ಮಾತನಾಡಿ, ಇತ್ತೀಚೆಗೆ ಶ್ರೀಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ಡೆತ್‍ನೋಟ್‍ನಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿ ಸುಮಾರು 187 ಕೋಟಿ ರೂ. ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಡೆತ್‍ನೋಡ್ ಬರೆದಿಟ್ಟಿದ್ದಾರೆ. ಈ ಅವ್ಯವಹಾರ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು.
ಪರಿಶಿಷ್ಟರ ಅಭಿವೃದ್ದಿಗೆ ಕುತ್ತು ತಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿಗಮದಿಂದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕೂಡಲೇ ಅಧಿಕಾರಿಯನ್ನು ಹೆದರಿಸಿ ಅಕ್ರಮ ಮಾಡುವಂತೆ ಮಾಡಿ ಅಧಿಕಾರಿಯ ಆತ್ಮಹತ್ಯೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಪಡುವಾರಹಳ್ಳಿ ರಾಮಕೃಷ್ಣ ಮಾತನಾಡಿ, ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ನೀಡಲು ಮುಂದಾಗಿದೆ. ಆದರೆ, ಸಿಐಡಿಗೆ ಪ್ರಕರಣ ವಹಿಸಿದರೆ, ಈ ಕೇಸ್ ಸಹ ಹಳ ಹಿಡಿಯುವ ಸಾಧ್ಯತೆ ಹೆಚ್ಚಿರುವುದರಿಂದ ಹಾಲಿ ನ್ಯಾಯಾಧೀಶರ ಸಮಿತಿ ರಚಿಸಿ ತನಿಖೆ ನಡೆಸಬೇಕು. ಹಾಗೇ ಸಮಾಜ ಕಲ್ಯಾಣ ಸಚಿವರು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶ್ರೀಧರ್, ರಾಜು ಮಾರ್ಕೆಟ್, ಕೆರೆಹಳ್ಳಿ ಮಾಧೇಶ್, ಹಿನಕಲ್ ಚಂದ್ರು, ವಿಜಯ್ ಕುಮಾರ್, ಸುರೇಶ್ ಕುಮಾರ್ ಬೀಡು, ರಂಗಸ್ವಾಮಿ, ಪುಟ್ಟರಾಜು, ರವಿ, ಮಂಜುನಾಥ್, ಮೂರ್ತಿ, ಮಹದೇವು, ನಂದೀಶ್ ಪಾಲ್ಗೊಂಡಿದರು.