ವಾಲ್ಮೀಕಿ ನಾಯಕ ಸಮಾಜ ಜಾಗೃತವಾಗಿರಬೇಕು

ಲಿಂಗಸಗೂರು.ನ೨೧- ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯವು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಮುದಾಯದ ಸಂಘಟನೆ ಮತ್ತು ಸಮಾಜದ ಜಾಗೃತೆ ಅಗತ್ಯವಾಗಿದೆ ಎಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು ಹೇಳಿದರು.
ಅವರು ಪಟ್ಟಣದ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಾತ್ರಾ ನಿಮಿತ್ಯವಾಗಿ ಸಮಾಜದ ಗಣ್ಯರೊಂದಿಗೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಬರುವ ಫೆಬ್ರುವರಿಯಲ್ಲಿ ೪ನೇ ವಾಲ್ಮೀಕಿ ಜಾತ್ರೆಯನ್ನು ಮಾಡಲಿದ್ದು ಸದರಿ ಜಾತ್ರೆಯಲ್ಲಿ ಈ ವರ್ಷದಿಂದ ರಥೋತ್ಸವ ಜರುಗಲಿದೆ ಅದಕ್ಕಾಗಿ ನಾಡಿನ ಮೂಲೆ ಮೂಲೆಯಿಂದ ಭಕ್ತಾದಿಗಳು ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜಾತ್ರೆಯ ನೆಪದಲ್ಲಿ ಸಮುದಾಯದ ಜನತೆ ಒಂದೆಡೆ ಸೇರಿದಂತಾಗುತ್ತದೆ ಅದರ ಜೊತೆಗೆ ಜನಜಾಗೃತಿಯನ್ನು ಮಾಡಬೇಕಾಗಿದೆ ಗುರುಪೀಠ ಸಮಾಜದ ಆಸ್ತಿಯಾಗಬೇಕು ಶ್ರೀಮಠವು ಶಕ್ತಿ ಮತ್ತು ಭಕ್ತಿಕೇಂದ್ರವಾಗಿ ಸಮಾಜದ ಹಲವು ಬೇಡಿಕೆಗಳಿಗೆ ಧ್ವನಿಯಾಗುತ್ತಿದೆ ನಮ್ಮ ಸಮಾಜವು ಅಭಿವೃದ್ದಿಯಾಗಬೇಕಾದರೆ ಸಮುದಾಯದ ಸಂಘಟನೆ ಮತ್ತು ಸಮಾಜದ ಜಾಗೃತಿಯಾಗಬೇಕಾಗಿದೆ ಎಂದರು.
ಅಲ್ಲದೆ ಪಟ್ಟಣದಲ್ಲಿರುವ ವಾಲ್ಮೀಕಿ ಸಮುದಾಯಭವನಕ್ಕೆ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಉತ್ತಮವಾದ ಸಮುದಾಯಭವನವನ್ನು ನಿರ್ಮಿಸಿ ಅದರ ಸದುಪಯೋಗವಾಗುವಂತೆ ಯತ್ನಿಸಲಾಗುವುದು ಎಂದರು ಇದೆ ಸಂದರ್ಭದಲ್ಲಿ ರಾಜನಹಳ್ಳಿಯಲ್ಲಿ ಜರುಗಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆಯ ೪ನೇ ವರ್ಷದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಗೊಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀ ವರದಾನೇಶ್ವರ ಸ್ವಾಮೀಜಿ ಜಿ,ಪಂ ಮಾಜಿ ಅಧ್ಯಕ್ಷ ಗುಂಡಪ್ಪನಾಯಕ, ಜಿಲ್ಲಾ ಸರಕಾರಿ ನೌಕರರ ಅಧ್ಯಕ್ಷ ಭೀಮಣ್ಣನಾಯಕ,ಪಿಡ್ಡನಗೌಡ ಈಚನಾಳ,ಯಮನಪ್ಪ ಸರ್ಜಾಪೂರ,ಲಕ್ಷ್ಮಣನಾಯಕ,ಲಕ್ಷ್ಮಣ ಬಾರಿಕೇರ್,ಯುವ ಸಂಘಟನೆಯ ಪದಾಧಿಕಾರಿಗಳು ಸಮಾಜದ ಗಣ್ಯರು ಸೇರಿದಂತೆ ಇದ್ದರು.