ವಾಲ್ಮೀಕಿ ತತ್ವಾದರ್ಶ ಸರ್ವಕಾಲಿಕ

ಬೆಂಗಳೂರು,ಏ.೧೯- ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಲ್ಮೀಕಿ ಅದ್ಬುತ ಜ್ಞಾನಿಗಳು ಅವರ ತತ್ವಾದರ್ಶಗಳು ಸಾರ್ವಕಾಲಿಕವಾಗಿವೆ ಎಂದು ಶಾಸಕ, ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ಕುದುರಗೆರೆ ಗ್ರಾಮದಲ್ಲಿ ಚೇತನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಇಬ್ಬರೂ ಸಹ ತಳ ಸಮುದಾಯದಿಂದ ಬಂದ ಅದ್ಭುತ ಜ್ಞಾನಿಗಳಿದ್ದು, ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನ ದೇಶದ ಪ್ರತಿ ನಾಗರೀಕರು ಪಾಲಿಸಬೇಕಾದ ಕಾನೂನನ್ನು ತಿಳಿಸುವ ಮೂಲಕ ಗೌರವಿಸಲ್ಪಡುತ್ತಿದೆ, ಅದೇ ರೀತಿ ವಾಲ್ಮೀಕಿ ಯವರು ರಚಿಸಿರುವ ರಾಮಾಯಣ ಗ್ರಂಥ ದೇಶದ ಪ್ರತಿ ನಾಗರೀಕರು ಗೌರವಿಸುವಂತಹ ಅತ್ಯದ್ಭುತ ಕೃತಿಯಾಗಿದೆ. ಇಂತಹ ಅತ್ಯುತ್ತಮ ಗ್ರಂಥಗಳನ್ನು ರಚಿಸಿದವರು ತಳಸಮುದಾಯದಿಂದ ಬಂದ ಮಹಾನ್ ಚೇತನರು ಎಂಬುದು ಹೆಮ್ಮೆಯ ವಿಚಾರ ಎಂದರು.
ಕೇಂದ್ರ ಸರ್ಕಾರಕ್ಕೆ ಅಂಬೇಡ್ಕರ್ ರವರ ತತ್ವಾದರ್ಶಗಳು ಮತ್ತು ಬಡವರ ಏಳಿಗೆಯ ಬಗ್ಗೆ ಉತ್ತಮ ಚಿಂತನೆಗಳಿಲ್ಲ. ಹೀಗಾಗಿ, ದೇಶದ ಪರಿಸ್ಥಿತಿ ಹದಗೆಟ್ಟಿದೆ.ಬಡವ-ಶ್ರೀಮಂತರ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿದ್ದು ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಬಡಜನರು ಜೀವನ ನಡೆಸುವುದು ದುಸ್ಥರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಪರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕುದುರಗೆರೆ ಗ್ರಾಮದ ಎರಡು ಸ್ರ್ತೀ ಶಕ್ತಿ ಗುಂಪುಗಳ ಒಟ್ಟು ಐವತ್ತು ಮಹಿಳೆಯರಿಗೆ ತಲಾ ಹತ್ತು ಸಾವಿರ ರು.ಗಳ ಸಹಾಯ ಧನದ ಚೆಕ್ಕುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚೇತನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ.)ಯ ಅಧ್ಯಕ್ಷ ಹಾಗೂ ಗ್ರಾ.ಪಂ ಉಪಾಧ್ಯಕ್ಷ ಕುದುರಗೆರೆ ಕೃಷ್ಣಮೂರ್ತಿ, ಗ್ರಾ.ಪಂ. ಸದಸ್ಯರಾದ ಲಕ್ಷ್ಮಿ ಅಣ್ಣೇಗೌಡ, ಮಂಜುಳ ನರಸೇಗೌಡ, ಪ್ರಜಾ ವಿಮೋಚನಾ ಚಳವಳಿ(ಸಮತಾವಾದ)ಯ ರಾಜ್ಯ ಉಪಾಧ್ಯಕ್ಷ ಜಾಲಕಿಟ್ಟಿ, ಕಾಂಗ್ರೆಸ್ ಮುಖಂಡರಾದ ತಿರುಮಲಪ್ಪ, ಮುನಿಕೃಷ್ಣಪ್ಪ ಸೇರಿದಂತೆ ಇನ್ನಿತರರಿದ್ದರು.