ವಾಲ್ಮೀಕಿ ಜಾತ್ರಾಮಹೋತ್ಸವಕ್ಕೆ ಪ. ಪಂಗಡಗಳ ಅನುದಾನ ಬಳಕೆ; ಆರೋಪ


ದಾವಣಗೆರೆ. ನ.೨೫; ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕೂಡಲೇ ಮಠ ತ್ಯಜಿಸಬೇಕು ಎಂದು ದಾವಣಗೆರೆ ನ್ಯಾಯವಾದಿ ಕೆ.ಎಂ ಮಲ್ಲಿಕಾರ್ಜುನ ಗುಮ್ಮನೂರು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಶ್ರೀಗಳು ಪರಿಶಿಷ್ಠ ಪಂಗಡಗಳ ಸಾಮಾಜಿಕ, ಶೈಕ್ಷಣಿಕ ,ಆರ್ಥಿಕ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ  ಕಾನೂನು ಬಾಹಿರವಾಗಿ ಬಳಕೆ  ಮಾಡಿದ್ದಾರೆ ಮತ್ತು ಸ್ವಂತ ಹೆಸರಿನಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಂಡೊಳ್ಳಿ ಗ್ರಾಮದಲ್ಲಿ ೧೭ ಎಕರೆ ಜಮೀನು ಖರೀದಿ ಮಾಡಿರುವುದು ಟ್ರಸ್ಟ್ ಕಾಯ್ದೆಗಳ ಉಲ್ಲಂಘನೆಯಾಗಿದೆ.ಈ ಹಿನ್ನೆಲೆಯಲ್ಲಿ ಅವರು ಕೂಡಲೇ ಮಠ ಬಿಡಬೇಕು ಹಾಗೂ ಮಠ ತ್ಯಜಿಸುವ ಮುನ್ನ ಅವರ ಹೆಸರಿನಲ್ಲಿರುವ ಚರ ಮತ್ತು ಸ್ಥಿರ ಆಸ್ತಿಯನ್ನು ಟ್ರಸ್ಟ್ ಹೆಸರಿಗೆ ವರ್ಗಾಯಿಸಬೇಕು ಎಂದು ಒತ್ತಾಯ ಮಾಡಿದರು.ಪರಿಶಿಷ್ಟ ಕಲ್ಯಾಣ ಇಲಾಖೆಯಿಂದ ಇಲ್ಲಿಯವರೆಗೂ ೭ ಕೋಟಿ ಅನುದಾನ ಜಾತ್ರಾ ಮಹೋತ್ಸವಕ್ಕೆ ಬಳಕೆ ಮಾಡಿದ್ದಾರೆ.ಜಾತ್ರೆ ಮಾಡುವುದರಿಂದ ಸಮಾಜದ ಅಭಿವೃದ್ಧಿಯಾಗುವುದಿಲ್ಲ.೨೦೨೨ ಫೆ.೧೮ -೧೯ ಕ್ಕೆ ನಿಗದಿಪಡಿಸಿರುವ ಜಾತ್ರಾ ಮಹೋತ್ಸವಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬಾರದು.ಒಂದು ವೇಳೆ ಬಿಡುಗಡೆ ಮಾಡುವುದಾದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಿ.ಯಾವುದೇ ಕಾರಣಕ್ಕೂ ಪರಿಶಿಷ್ಠ ಪಂಗಡದ ಅನುದಾನ ಬಿಡುಗಡೆ ಮಾಡಬಾರದು. ಟ್ರಸ್ಟ್‌ ಈ ವಿಚಾರವಾಗಿ ಗಮನಹರಿಸಬೇಕು ಇಲ್ಲವಾದರೆ ಟ್ರಸ್ಟ್‌ ಸೂಪರ್ ಸೀಡ್ ಮಾಡಬೇಕು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಟ್ರಸ್ಟ್‌ ಸೂಪರ್ ಸೀಡ್ ಗೆ ಜಿಲ್ಲಾ ನ್ಯಾಯಾಲಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.