ವಾಲ್ಮೀಕಿ ಜಯಂತಿ, ಸರದಾರ್ ವಲ್ಲಭಭಾಯಿ ಪಟೇಲ್‌ರವರ ಕಾರ್ಯಕ್ರಮ

ರಾಯಚೂರು,ನ.೧- ನಗರದ ಪ್ರತಿಷ್ಠಿತ ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ವಿದ್ಯಾರ್ಥಿ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್ ಕ್ರಾಸ್ ಘಟಕ ಮತ್ತು ಎನ್.ಸಿ.ಸಿ ಕಂಪನಿಗಳ ಸಂಯುಕ್ತಾಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸರದಾರ್ ವಲ್ಲಭಭಾಯಿ ಪಟೇಲ್‌ರವರ ಜನ್ಮ ದಿನಾಚರಣೆ ಅಂಗವಾಗಿ “ರಾಷ್ಟ್ರೀಯ ಏಕತಾ ದಿವಸ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಬಸವರಾಜಪ್ಪ ಅವರು ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅವರು ಮಾತನಾಡುತ್ತಾ “ಆದಿ ಕವಿ ಮಹರ್ಷಿ ವಾಲ್ಮೀಕಿ ರಚಿಸಿದ “ರಾಮಾಯಣ ಮಹಾಕಾವ್ಯವು ಜಗದ್ವಂದಿತ ಹಾಗೂ ಪೂಜ್ಯನೀಯ ಕಾವ್ಯವಾಗಿದೆ ಎಂದು ತಿಳಿಸಿ, ಮುಂದುವರಿದು ಮಾತನಾಡುತ್ತ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲರು ದೇಶ ಕಂಡ ಅಪ್ರತಿಮ ದೇಶ ಭಕ್ತ ಹಾಗೂ ಮಹಾನ್ ನಾಯಕರಾಗಿದ್ದರು. ಅಂತಹವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಹಾವಿದ್ಯಾಲಯದ ಕನ್ನಡ ಸಹಪ್ರಾಧ್ಯಾಪಕರಾದ ಡಾ|| ಸಿದ್ಧಲಿಂಗಪ್ಪ ಅವರು ಮಾತನಾಡುತ್ತ್ತಾ, ಸಂಸ್ಕೃತ ಭಾಷೆಯ ಆದಿ ಕವಿ ಮಹರ್ಷಿ ವಾಲ್ಮೀಕಿಯವರು ಇಡೀ ಮಾನವ ಸ್ವಭಾವವನ್ನೇ ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ ಎಂದು ಹೇಳಿದರು. ಮುಂದುವರಿದು ಮಾತನಾಡುತ್ತಾ, ಭಾರತ ರತ್ನ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲರವರು ಭಾರತದ ಏಕೀಕರಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿ, ದೇಶದ ಒಕ್ಕೂಟ ವ್ಯವಸ್ಥೆಗೆ ಭದ್ರವಾದ ಅಡಿಪಾಯವನ್ನು ಹಾಕಿದರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀನಿವಾಸ ರಾಯಚೂರುಕರ್ ಅವರು ಸ್ವಾಗತಗೈದು, ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಭೋದಿಸಿದರು. ಉಪನ್ಯಾಸಕರಾದ ಅಳ್ಳಪ್ಪ ಅವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು. ಈ ಕಾರ್ಯಕ್ರಮದಲಿ ವೆಂಕೋಬರಾವ್, ಕುಮಾರಿ ಸುಶೀಲಾ, ಬಾಬು, ಲಕ್ಷ್ಮಿ ಅವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.