
ಸಂಜೆವಾಣಿ ವಾರ್ತೆ
ಹೊಸಪೇಟೆ ಏ14: ನಗರದ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಜನಾಂಗದವರಿಗೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಹಕ್ಕುಗಳ ತಾಲೂಕು ಸಮಿತಿ ಆಗ್ರಹಿಸಿತು.
ಈ ಕುರಿತು ಜಿಲ್ಲಾಧಿಕಾರಿ ಎಸ್.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು, ಇಲ್ಲಿನ ವಾಲ್ಮೀಕಿ ಜನಾಂಗದ ಈಗಿರುವ ಸ್ಮಶಾನ ಭೂಮಿ ಅತ್ಯಂತ ಕಿರಿದಾಗಿದೆ. ಅಂತ್ಯಕ್ರಿಯೆಗೆ ಸ್ಥಳವೇ ಇಲ್ಲದಂತಾಗಿದೆ. ಸಮುದಾಯದ ಯಾರಾದರೂ ಕಾಲವಾದರೆ ಎರಡು ವರ್ಷದ ಹಿಂದಿನ ಸಮಾಧಿ ತೆಗೆದು ಅಲ್ಲೇ ಸಮಾಧಿ ಮಾಡುವ ಸ್ಥಿತಿ ಇದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಅನೇಕ ಬಾರಿ ಈಗಾಗಲೇ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ.ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಸರ್ವೇ ನಂ. 326 ಅಥವಾ ಜಂಬುನಾಥನ ಹಳ್ಳಿ ಸರ್ವೇ ನಂ. 50ರ ಪೈಕಿ ಇಲ್ಲವೆ ಈ ಸಮಾಜ ಈಗ ಉಪಯೋಗಿಸುತ್ತಿರುವ ಸಮಾಜದ ಹತ್ತಿರ ಇರುವ 10 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕರಾದ ಮರಡಿ ಜಂಬಯ್ಯನಾಯಕ, ಬಿ.ತಾಯಪ್ಪ ನಾಯಕ, ತಾಲೂಕು ಸಂಚಾಲಕ ಬಿ.ರಮೇಶ ಕುಮಾರ್ ಇತರರು ಪಾಲ್ಗೊಂಡಿದ್ದರು.