ವಾಲ್ಮೀಕಿಯಿಂದ ದೇಶದ ಪರಂಪರೆಗೆ ಅಪಾರ ಕೊಡುಗೆ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಪುತ್ತೂರು, ನ.೧- ಆದಿಕವಿ ವಾಲ್ಮೀಕಿ ಅವರು ಓರ್ವ ವ್ಯಕ್ತಿಯಲ್ಲ ಅದೊಂದು ಶಕ್ತಿಯಾಗಿದ್ದು, ದೇಶದ ಪರಂಪರೆಗೆ ಮಹರ್ಷಿ ವಾಲ್ಮೀಕಿ ಅವರ ಕೊಡುಗೆ ಅಪಾರವಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ವಾಲ್ಮೀಕಿ ಜನಾಂಗವನ್ನು ಗೌರವಿಸಬೇಕಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಶನಿವಾರ ಪುತ್ತೂರಿನ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹುಟ್ಟು ಹೇಗೆ ಎಂಬುದು ಮುಖ್ಯವಲ್ಲ ಆದರೆ ಬದುಕಿನಲ್ಲಿ ಏನು ಮಾಡಿದ್ದೇವೆ ಎಂಬುದು ಮುಖ್ಯ ಅದರಂತೆ ಎಲ್ಲಿ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎಂಬುದು ಬಹಳ ಮುಖ್ಯ. ಜಗತ್ತು ನಾಗರೀಕತೆಯನ್ನು ಕಲಿಯುವ ಮೊದಲೇ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜೀವನದ ಸಂದೇಶವನ್ನು ಜನತೆಗೆ ನೀಡುವ ಕೆಲಸ ಮಾಡಿದ್ದಾರೆ. ಅವರ ಆ ಮಹಾಕಾವ್ಯವನ್ನು ತಿಳಿಯುವುದರ ಜೊತೆಗೆ ಅವರನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಬುಡಕಟ್ಟು ಸಮಾಜಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರವು ವಾಲ್ಮೀಕಿ ಜಯಂತಿ ಆಚರಣೆಯನ್ನು ನಡೆಸುತ್ತಿದೆ ಎಂದರು.

ವೇದಿಕೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ರಮೇಶ್ ಬಾಬು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಪಂ ಸದಸ್ಯರಾದ ಹರೀಶ್ ಬಿಜತ್ರೆ, ಮೀನಾಕ್ಷಿ ಮಂಜುನಾಥ್, ಉಪತಹಸೀಲ್ದಾರ್ ರಾಮಣ್ಣ ನಾಯ್ಕ, ದಯಾನಂದ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಚನಿಯಪ್ಪ ನಾಯ್ಕ, ಕಂದಾಯ ಇಲಾಖೆಯ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೊಂಬೆಟ್ಟು ಹಾಸ್ಟೆಲ್‌ನ ವಾರ್ಡನ್ ಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬನ್ನೂರು ಹಾಸ್ಟೆಲ್ ವಾರ್ಡನ್ ಪ್ರೇಮಲತಾ ವಂದಿಸಿದರು.