ವಾಲ್ಮೀಕಿಯವರು ಜಗತ್ತಿಗೆ ರಾಮಾಯಣ ಮಹಾಕಾವ್ಯ ತಿಳಿಸಿಕೊಟ್ಟಿದ್ದಾರೆ

ತಿ.ನರಸೀಪುರ. ಮಾ.13:- ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅಧಿಕಾರ ಮತ್ತು ಆಸ್ತಿಗಾಗಿ ಹಪಾಹಪಿಸುತ್ತಾನೆ ಆದರೆ ನಿಜವಾದ ಧರ್ಮ ತ್ಯಾಗದಲ್ಲಿದೆ ಎಂಬ ಪರಮ ಸತ್ಯವನ್ನು ಮಹರ್ಷಿ ವಾಲ್ಮೀಕಿಯವರು ಇಡೀ ಜಗತ್ತಿಗೆ ರಾಮಾಯಣ ಮಹಾಕಾವ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾ ನಂದ ಸ್ವಾಮಿ ಹೇಳಿದರು.
ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಹಾಗು ಶ್ರೀ ವಾಲ್ಮೀಕಿ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮನುಷ್ಯನ ಜೀವನ ಗಾಳಿಗಿಟ್ಟ ದೀಪದಂತೆ, ದೇಹದೊಳಗಿರುವ ದೀಪ ಆರುವ ಮುನ್ನ ಭಗವಂತನ ನಾಮ ಸ್ಮರಣೆ ಮಾಡಬೇಕು, ಆ ಮೂಲಕ ನಮ್ಮ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು, ಬಹುತೇಕ ಸಾಂಸಾರಿಕ ಜಂಜಾಟದಲ್ಲಿ ಭಗವಂತನ ನಾಮಸ್ಮರಣೆ ಮರೆತಿರುತ್ತೇವೆ, ಭಗವಂತ ನಮಗೆಲ್ಲವನ್ನೂ ಕೊಟ್ಟಿದ್ದಾನೆ.ವಾಸ ಮಾಡಲು ಭೂಮಿ, ಮನೆ ಕಟ್ಟಲು ಜಾಗ, ಮಳೆ, ಬೆಳೆ, ಗಾಳಿ ಎಲ್ಲ ಕೊಟ್ಟಿರುವ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಆತನಿಗೆ ನಾವು ಕೃತಜ್ಞರಾಗಿರಬೇಕು ಎಂದರು.
ಬದುಕಿನ ಸಾರ್ಥಕತೆ ಭಗವಂತನ ನಾಮ ಸ್ಮರಣೆಯಲ್ಲಿ ಅಡಗಿರುತ್ತದೆ, ರಾಮತಾರಕ ಮಂತ್ರವನ್ನು ಪ್ರತಿನಿತ್ಯ ಹೇಳುವ ಮೂಲಕ ಆತ್ಮಕಲ್ಯಾಣ ಮಾಡಿಕೊಳ್ಳಬೇಕೆಂದು ಮಹರ್ಷಿ ವಾಲ್ಮೀಕಿ ಹೇಳುತ್ತಾರೆ ಹಾಗಾಗಿ ನಾವೆಲ್ಲರೂ ಆತ್ಮ ಕಲ್ಯಾಣ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯ ನಮ್ಮ ಸಂಸ್ಕೃತಿಯ ತಾಯಿ ಬೇರು ಎಂದ ಶ್ರೀಗಳು ರಾಮಾಯಣ ಹಾಗು ವೇದವ್ಯಾಸ ಮಹರ್ಷಿಗಳು ಬರೆದ ಮಹಾಭಾರತ ದೇಶದ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ,ವಾಲ್ಮೀಕಿ ಹಾಗು ವೇದವ್ಯಾಸರು ಬರೆದ ರಾಮಾಯಣ ಮಹಾಭಾರತವನ್ನು ಪ್ರಸಕ್ತ ಸನ್ನಿವೇಶ ದಲ್ಲಿ ತುಲನೆ ಮಾಡಿದಾಗ,ಆಸ್ತಿ ಮತ್ತು ಅಧಿಕಾರಕ್ಕಾಗಿ ಅಣ್ಣ- ತಮ್ಮಂದಿರ ತ್ಯಾಗವನ್ನು ರಾಮಾಯಣ ಎಂದು ಕರೆದರೆ,ಆಸ್ತಿ ಮತ್ತು ಅಧಿಕಾರಕ್ಕಾಗಿ ಅಣ್ಣ-ತಮ್ಮಂದಿರ ನಡುವೆ ನಡೆವ ಕಲಹ,ಯುದ್ದವನ್ನು ಮಹಾಭಾರತ ಎಂದೇ ಅರ್ಥೈಸಬಹುದಾಗಿದೆ ಇದೇ ಸಂದೇಶವನ್ನು ವೇದವ್ಯಾಸರು ನೀಡಿದ್ದಾರೆ ಎಂದರು.
ಶ್ರೀರಾಮನ ಆದರ್ಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತೀಯ ವೈವಾಹಿಕ ಕಾಯ್ದೆಯಡಿ ಎತ್ತಿಹಿಡಿದಿದ್ದಾರೆ, ಭಾರತ ದೇಶದಲ್ಲಿ ವೈವಾಹಿಕ ಸಂಬಂಧಗಳು, ಮಾನವೀಯ ಸಂಬಂಧಗಳು ಗಟ್ಟಿಯಾಗಿ ನಿಲ್ಲುತ್ತವೆ ಹಾಗಾಗಿ ಭಾರತ ಗುರುವಿನ ಸ್ಥಾನದಲ್ಲಿ ನಿಲ್ಲುತ್ತದೆ ,ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕವಾಗಿ ಮನುಷ್ಯ ಹುಟ್ಟಿನಿಂದ ಸಾಯುವ ವರೆಗೂ ಅಧಿಕಾರ ಮತ್ತು ಆಸ್ತಿಗಾಗಿ ಹಪಾಹಪಿಸುತ್ತಾನೆ ಆದರೆ ನಿಜವಾದ ಧರ್ಮತ್ಯಾಗದಲ್ಲಿದೆ ಎಂಬ ಸತ್ಯದ ಸಂದೇಶವನ್ನು ರಾಮಾಯಣದ ಮೂಲಕ ಇಡೀ ಜಗತ್ತಿಗೆ ರವಾನೆ ಮಾಡಿದ್ದಾರೆ ಎಂದರು.ಹಾಗಾಗಿ ಮನುಷ್ಯರು ಆಸ್ತಿ ಅಧಿಕಾರಕ್ಕಾಗಿ ಕಲಹ ಮಾಡಿಕೊಳ್ಳದೇ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮೊಟಕಾದ ವೇದಿಕೆ ಕಾರ್ಯಕ್ರಮ!
ಮಾಜಿ ಸಂಸದ ಆರ್.ದೃವನಾರಾಯಣ್ ರವರು ನಿನ್ನೆ ಅಕಾಲಿಕ ಸಾವಿಗೀಡಾದ ಹಿನ್ನೆಲೆಯಲ್ಲಿ ವೇದಿಕೆ ಭಾಷಣವನ್ನು ಸ್ವಾಮೀಜಿಗಳ ಆಶೀರ್ವಚನಕ್ಕೆ ಸೀಮಿತ ಗೊಳಿಸಲಾಯಿತು.
ದೃವನಾರಾಯಣ್ ರವರ ಸಾವಿನಿಂದ ಕ್ಷೇತ್ರ ಸೂತಕದಲ್ಲಿದೆ ಹಾಗಾಗಿ ಯಾವುದೇ ಕಾರ್ಯಕ್ರಮ ಮಾಡಬಾರದಿತ್ತು.ಆದರೆ ಗ್ರಾಮಸ್ಥರು ಮೊದಲೇ ಕಾರ್ಯ ಕ್ರಮ ಆಯೋಜಿಸಿದ್ದರಿಂದ ಕೇವಲ ನಾನು ಆಶೀರ್ವಚನ ಮಾಡಿ ಕಾರ್ಯಕ್ರಮ ಮುಗಿಸುತ್ತೇನೆ ಎಂದು ಪ್ರಸನ್ನಾ ನಂದ ಪುರಿ ಸ್ವಾಮಿಗಳು ಪ್ರಕಟಿಸಿದರು.ಹಾಗಾಗಿ ವೇದಿಕೆ ಭಾಷಣ ಮೊಟಕಾಯಿತು.ಕಾರ್ಯಕ್ರಮಕ್ಕೂ ಮೊದಲು ದೃವನಾರಾಯಣ್ ನಿಧನಕ್ಕೆ ಮೌನಾಚರಣೆ ಮಾಡಲಾಯಿತು.
ವಾಲ್ಮೀಕಿ ಸಮುದಾಯ ಭವನದ ಮುಂದೆ ಸ್ಥಾಪಿಸಲಾಗಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಪ್ರಸನ್ನಾನಂದ ಶ್ರೀಗಳು,ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ಶಾಸಕ ಎಂ.ಅಶ್ವಿನ್ ಕುಮಾರ್ ಅನಾವರಣಗೊಳಿಸಿದರು.