ವಾಲ್ಮೀಕಿಗೆ ಅಪಚಾರ ಮಾಡುವವರ ವಿರುದ್ಧ ಸಿಡಿದೇಳಿ

ಹುಳಿಯಾರು, ನ. ೫- ರಾಮಾಯಣದಲ್ಲಿ ವಾಲ್ಮೀಕಿ ಬರೆಯದೆ ಇರುವ ಅನೇಕ ಪ್ರಸಂಗಗಳನ್ನು ಸೇರಿಸಿ ವಾಲ್ಮೀಕಿ ವಿರುದ್ಧ ಅಪಚಾರ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು ಇಂತಹವರ ವಿರುದ್ಧ ವಾಲ್ಮೀಕಿ ಕುಲಸ್ಥರು ಸಿಡಿದೇಳಬೇಕಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಸಾಪ ನಿಘಟಕಪೂರ್ವ ಅಧ್ಯಕ್ಷ ರವಿಕುಮಾರ್ ಕರೆ ನೀಡಿದರು.
ಹುಳಿಯಾರಿನ ಗಾಂಧಿಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜಾಗೃತಿ ಹೋರಾಟ ವೇದಿಕೆಯಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಅವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ವೇದನೆಯನ್ನು ರಾಮಾಯಣ ಕಾವ್ಯದಲ್ಲಿ ಚಿತ್ರಿಸಿದ್ದಾರೆ. ರಾಮಾಯಣವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಓದಿದಾಗ ಇರದಲ್ಲಿರುವ ದಲಿತ ಸಂವೇದನೆ, ಸ್ತ್ರೀ ಸಂವೇದನೆ, ಬುಡಕಟ್ಟು ಜನಾಂಗದ ಸಂವೇದನೆ ನೋಡಬಹುದಾಗಿದೆ. ಅಲ್ಲದೆ ಇಂತಹ ಸಾಮಾಜಿಕ ಶೋಷಣೆಗೆ ಚಿಕಿತ್ಸೆಯೂ ಸಹ ಇದರಲ್ಲಿದೆ ಎಂದರಲ್ಲದೆ ರಾಮಾಯಣ ಗ್ರಂಥ ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಿದೆ ಎಂದರು.
ವಾಲ್ಮೀಕಿ, ಬಸವಣ್ಣ, ಅಂಬೇಡ್ಕರ್, ಕನಕ ಇವರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ ಎನ್ನುವ ವಾದ ಆರಂಭವಾಗಿದೆ. ಈ ಜಾತಿಗಳ ಜನರು ಜಯಂತಿಯ ನೆಪದಲ್ಲಿ ತಮ್ಮ ಪೂರ್ವಿಕರನ್ನು ನೆನೆಯುವುದರಲ್ಲಿ ತಪ್ಪೇನಿದೆ. ತಮ್ಮ ಹಿರಿಯಜ್ಜನನ್ನು ಪೂಜಿಸಿ, ಮೆರವಣಿಗೆ ಮಾಡಿದ ಮಾತ್ರಕ್ಕೆ ಜಾತಿ ಬಣ್ಣ ಬಳಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಜಾತಿ ಬಣ್ಣ ಬಳಿಯುವವರು ಪ್ರತ್ಯೇಕವಾಗಿ ಇಂತಹ ಮಹಾಪುರುಷರ ಜಯಂತಿಗಳನ್ನು ಸಂಘಟಿಸಿ ಮಾದರಿಯಾಗಲಿ ಎಂದರು.
ಬುಕ್ಕಾಪಟ್ಟಣ ಹೋಬಳಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಗಂಗಾಧರ್ ಮಾತನಾಡಿ, ರಾಮಾಯಣದ ಪ್ರತಿಯೊಂದು ಪಾತ್ರಗಳು ಸಮಾಜದಲ್ಲಿ ವ್ಯಕ್ತಿ ಯಾವ ರೀತಿಯಲ್ಲಿ ಬದುಕಬೇಕು. ಸಾಮಾಜಿಕ ಮೌಲ್ಯಗಳು, ಮಾನವೀಯ ಸಂಬಂಧಗಳು ಪ್ರತಿಯೊಂದನ್ನು ನಮಗೆ ಕಲಿಸುತ್ತಾ ಹೋಗುತ್ತವೆ. ಆದ್ದರಿಂದ ರಾಮಾಯಣ ಓದುವ ಜತೆಗೆ ವಾಲ್ಮೀಕಿಯವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುಮಧಕರಿ, ಎಎಸ್‌ಐ ಆನಂದಪ್ಪ, ಕ್ಯಾತನಾಯ್ಕನಹಳ್ಳಿ ಮಂಜಣ್ಣ, ದುರ್ಗರಾಜ್, ಶಶಿಧರ್, ನಂದಿಹಳ್ಳಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.