
ಕೋಲಾರ, ಜು.೨೭: ವಾರ್ಷಿಕ ಆಡಿಟ್ ಹಾಗೂ ಲೆಕ್ಕ ಪತ್ರ ವರದಿ ಸಲ್ಲಿಕೆಯಲ್ಲಿ ಆಗಿರುವ ವಿಳಂಬವನ್ನು ಕುರಿತು ಪರಿಶೀಲಿಸಿದ ಕರ್ನಾಟಕ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಸಾ.ರಾ.ಮಹೇಶ್ ಅವರು ಇನ್ನೂ ೨ ತಿಂಗಳೊಳಗಾಗಿ ಉಭಯ ಸದನಗಳಿಗೆ ಸಲ್ಲಿಸಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಕೋಲಾರ ಜಿಲ್ಲಾ ಪಂಚಾಯತ್ ಮತ್ತು ಅಧೀನ ಇಲಾಖೆಗಳು ಲೆಕ್ಕ ಪರಿಶೋಧನಾ ವರದಿಗಳಲ್ಲಿ ಆಡಿಟ್ ಕಂಡಿಕೆಗಳು ತೀರುವಳಿ ಆಗದೆ ಇರುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ವಿವಿಧ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಬಾಕಿ ಉಳಿದಿರುವ ವಾರ್ಷಿಕ ಲೆಕ್ಕ ಪತ್ರ ವರದಿಯಲ್ಲಿ ಸಲ್ಲಿಕೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಧಾನ ಮಂಡಲದ ಕಾಗದ ಪತ್ರಗಳ ಜಂಟಿ ಕಾರ್ಯದರ್ಶಿಗಳಾದ ಸಿ.ಬಿ.ಕೆಂಪಮ್ಮ, ಅಧೀನ ಕಾರ್ಯದರ್ಶಿಗಳಾದ ಪುಟ್ಟ ಓಬಳರೆಡ್ಡಿ, ಸಮಿತಿ ಸದಸ್ಯರಾದ ಬಿ.ಎಂ.ಸುಕುಮಾರ್ಶೆಟ್ಟಿ, ಬಿ.ಜೆ.ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್, ಉಪ ಕಾರ್ಯದರ್ಶಿಗಳಾದ ಲಕ್ಷ್ಮೀ, ಯೋಜನಾ ನಿರ್ದೇಶಕರಾದ ಶೃತಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.