ವಾರ್ಡ ಸಮಿತಿ ಸದಸ್ಯತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಲಹೆ

ಕಲಬುರಗಿ:ಜು.19:ವಾರ್ಡ ಸಮಿತಿ ಸದಸ್ಯತ್ವದ ಕುರಿತು ಕಲ್ಬುರ್ಗಿ ನಗರದ ಸಾರ್ವಜನಿಕರಲ್ಲಿ ಸಮಿತಿ ಸದಸ್ಯತ್ವದ ಬಗ್ಗೆ ತಿಳುವಳಿಕೆಯ ಕೊರತೆ ಇದೆ. ಈ ನಿಟ್ಟಿನಲ್ಲಿ ಕಲ್ಬುರ್ಗಿ ನಗರದಾದ್ಯಂತ ಜನರಿಗೆ ಮಹಾನಗರಪಾಲಿಕೆ ಅರಿವು ಮೂಡಿಸುವ ಕೈಂಕರ್ಯದಲ್ಲಿ ತೊಡಗಬೇಕಾದ ಅವಶ್ಯಕತೆ ಇದೆ ಎಂದು ಕಲ್ಬುರ್ಗಿ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷ ಮತ್ತು ವಾರ್ಡ ಸಮಿತಿ ಬಳಗದ ಸದಸ್ಯರು ಆಗಿರುವ ವಾಸ್ತುಶಿಲ್ಪಿ ಪಿ.ಎಸ್ ಮಹಾಗಾಂವ್ಕರ್ ಹೇಳಿದರು.

ಜನಾಗ್ರಹ ಸಂಸ್ಥೆ, ವಾರ್ಡ ಸಮಿತಿ ಬಳಗ, ಮಹಾನಗರ ಪಾಲಿಕೆ ಮತ್ತು ಕಲ್ಬುರ್ಗಿ ನಗರದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ವಾರ್ಡ ಸಮಿತಿ ಜಾಗೃತಿ ಜಾಥಾ ,ನಾಗರಿಕರ ನಡಿಗೆ ವಾರ್ಡ ಸಮಿತಿ ಕಡೆಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷ ಪಿ ಎಸ್ ಮಹಾಗಾಂವ್ಕರ್, ಮಹಾನಗರ ಪಾಲಿಕೆ ಕಳೆದ ಹಲವು ತಿಂಗಳಿಂದ ವಾರ್ಡ ಸಮಿತಿ ಸದಸ್ಯತ್ವಕ್ಕಾಗಿ ಅರ್ಜಿ ಕರೆದಿದ್ದು ಹಲವು ವಾರ್ಡಗಳಲ್ಲಿ ಸಮರ್ಪಕ ಅರ್ಜಿ ಬಾರದಿರುವುದಕ್ಕೆ ಸೂಕ್ತ ತಿಳುವಳಿಕೆಯ ಕೊರತೆ ಇದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪಕ ತಿಳುವಳಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೆಕೆಂದರು.ಇದೇ ವೇಳೆ ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಕೆ.ಎಸ್ ವಾಲಿ ಮಾತನಾಡಿ, ಮಹಾನಗರ ಪಾಲಿಕೆ ಇನ್ನು ಮುಂದೆ ವಾರ್ಡ ಸಮಿತಿ ರಚನೆ ಮಾಡಲು ತಡಮಾಡದೇ ಮುಂಬರುವ ದಿನಗಳಲ್ಲಿ ಮುಂದಿನ ಹೆಜ್ಜೆ ಇಡಲು ಈಗಿನಿಂದಲೇ ತಯಾರಾಗಬೇಕು.ನಗರದ ವಾರ್ಡಗಳ ಸಮಸ್ಯೆಗಳಿಗೆ ಮುಕ್ತಿ ಸಿಗಲು ಮತ್ತು ನಗರದ ಅಭಿವೃದ್ಧಿಗೆ ಸಮಿತಿ ರಚನೆ ಮಾಡಿದರೆ ಪಾಲಿಕೆಯ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಲಿದೆ.ಕಡಿಮೆ ಅರ್ಜಿ ಬಂದಿರುವ ವಾರ್ಡಗಳಲ್ಲಿ ಪಾಲಿಕೆ ಜಾಗೃತಿ ಮೂಡಿಸಬೇಕು. ಕಸ ಸಂಗ್ರಹ ವಾಹನಗಳಲ್ಲಿ ತುರ್ತಾಗಿ ಜಿಂಗಲ್ ಹಾಕಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್ಸಗಳಲ್ಲಿ ವಾರ್ಡ ಸಮಿತಿ ಸದಸ್ಯರಾಗಲು ಅರ್ಜಿ ಸಲ್ಲಿಸುವ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ಬ್ಯಾನರ್ಗಳನ್ನು ಹಾಕಲು ಆಯುಕ್ತರು ಸೂಕ್ತ ನಿರ್ದೇಶನ ನೀಡಬೇಕು. ನಗರದಲ್ಲಿರುವ ಎಂ.ಎಸ್.ಡಬ್ಲು ,ಎಲ್ ಎಲ್ ಬಿ, ಪತ್ರಿಕೋದ್ಯಮ ಕಾಲೇಜಿನ ವಿದ್ಯಾರ್ಥಿಗಳನ್ನು ಜಾಗೃತಿ ಮೂಡಿಸುವ ಕಾರ್ಯಕ್ಕೆ ತರಬೇತಿಗೊಳಿಸಿದರೆÉ ವಿದ್ಯಾರ್ಥಿಗಳಿಗೂ ನಗರ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದ ಕುರಿತ ಸಂಪೂರ್ಣ ಜ್ಞಾನಾರ್ಜನೆಗೆ ಅನುಕೂಲವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪಾಲಿಕೆಯ ಕೌನ್ಸಿಲ್ ಸೆಕ್ರೆಟರಿ ಸಂತೋಷ ಪಾಟೀಲ್ ಅವರು ಚರ್ಚೆ ಮಾಡಿ, ವಾರ್ಡ ಸಮಿತಿ ಸದಸ್ಯತ್ವಕ್ಕಾಗಿ ಅಗತ್ಯ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ವಾರ್ಡ ಸಮಿತಿ ಜಾಗೃತಿ ಜಾಥಾದಲ್ಲಿ ಜನಾಗ್ರಹ ಸಂಸ್ಥೆಯ ಸಂಯೋಜಕ ಅಧಿಕಾರಿ ಶ್ರಾವಣಯೋಗಿ ಹಿರೇಮಠ, ಜಯನಗರ ಅಭಿವೃದ್ಧಿ ಸಂಘಧ ಅಧ್ಯಕ್ಷ ಡಾ.ಕೆ.ಎಸ್ ವಾಲಿ,ಕಲ್ಬುರ್ಗಿ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷ ಪಿ.ಎಸ್ ಮಹಾಗಾಂವ್ಕರ್, ರೋಟರಿಕ್ಲಬ್ ಅಧ್ಯಕ್ಷ ರಮೇಶ್ ಪಾಟೀಲ್, ನಿವೃತ್ತ ಪೊಲೀಸ್ ಅಧಿಕಾರಿಗಳ ಕಟ್ಟಡ ಸಮಿತಿ ಸಂಘದ ಅಧ್ಯಕ್ಷ ಜಿ.ಎಂ.ಯಾತನೂರ್,ಇನ್ಸ್ಟಿಟುಶನ್ ಆಫ್ ಎಂಜಿನಿಯರ್ಸ ಸಂಘದ ಸದಸ್ಯರು, ನಯಾ ಸವೇರಾ ಸಂಘಟನೆ ಅಧ್ಯಕ್ಷ ಮೊದಿನ್ ಪಟೇಲ್ ಅಣಬಿ,ಮುಕ್ತಿ ಆರ್ಗನೈಜೇಶನ್ ಸಂಘದ ಸದಸ್ಯರು ಹಾಗೂ ಅಧ್ಯಕ್ಷ ಜೈಭೀಮ್ ಧರ್ಗೆ,ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ಬಿ ಎಂ ರಾವೂರ್,ರಾಮು ಪವಾರ್, ವಾರ್ಡ ಸಮಿತಿ ಬಳಗದ ಸದಸ್ಯರು ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳು ವಾರ್ಡ ಸಮಿತಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದವು.