ವಾರ್ಡ ಸಂಖ್ಯೆ 23ರಲ್ಲಿ ಮೂಲಭೂತ ಸೌಲಭ್ಯಗಳು ಕಲ್ಪಿಸಲು ಒತ್ತಾಯಿಸಿ ರಾಮನಗರ ಬಡಾವಣೆಯ ನಾಗರಿಕರಿಂದ ಪ್ರತಿಭಟನಾ ಮೆರವಣಿಗೆ

ಬೀದರ, ನ. 07ಃ ನಗರಸಭೆಯ ವಾರ್ಡ ಸಖ್ಯೆ 23ರ ವ್ಯಾಪ್ತಿಯಲ್ಲಿ ಬರುವ ರಾಮನಗರ ಬಡಾವಣೆಯಲ್ಲಿ ಹದಗೆಟ್ಟ ರಸ್ತೆಗಳು ದುರಸ್ತಿ ಮಾಡಬೇಕು ಹಾಗೂ ಮೂಲಭೂತ ಸೌಲಭ್ಯಗಳಾದ ರಸ್ತೆ, ಸಿಸಿ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ವಿವಿಧ ಕಾಮಗಾರಿಗಳು ಆರಂಭಿಸಬೇಕು ಎಂದು ಒತ್ತಾಯಿಸಿ, ನಗರದ ರಾಮನಗರ ಬಡಾವಣೆಯ ದೇವೆಂದ್ರ ರಾಮಚಂದ್ರ ಸೋನಿ ಅವರ ನೇತೃತ್ವದಲ್ಲಿ ನಗರದ ರಾಮನಗರ ಕಾಲೋನಿಯಿಂದ ಬೀದರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಬೀದರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಮನಗರ ಬಡಾವಣೆಯ ನಿವಾಸಿ ದೇವೆಂದ್ರ ಆರ್. ಸೋನಿ ಅವರು ಮಾತನಾಡುತ್ತ, ಕಳೆದ 15 ವರ್ಷಗಳಿಂದ ಬೀದರ ಶಾಸಕರಿಗೆ ರಾಮನಗರ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡುವಂತೆ ಮನವಿಗಳ ಮೇಲೆ ಮನವಿಗಳು ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಆದ್ದರಿಂದ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂಬ ಉದ್ದೇಶದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.

ಬೀದರ ಶಾಸಕರು ರಾಮನಗರ ಬಡಾವಣೆಯಲ್ಲಿ ವಾರ್ಡ ಸಂಖ್ಯೆ 23 ರಲ್ಲಿ 100 ಲಕ್ಷ ರೂಪಾಯಿಗಳ ಕಾಮಗಾರಿಯ ಕಟೌಟ್ ಹಚ್ಚಿದ್ದಾರೆ. ಶಾಸಕರು 1 ಕೋಟಿ ರೂಪಾಯಿಗಳ ಲೆಕ್ಕಪತ್ರವನ್ನು ರಾಮನಗರ ಬಡಾವಣೆಯ ಜನರಿಗೆ ಕೊಡಬೇಕು ಎಂದ ಅವರು, 15 ದಿನದೊಳಗಾಗಿ ರಾಮನಗರ ಕಾಲೋನಿಯಲ್ಲಿ ಶಾಸಕರು ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳು ಆರಂಭಿಸದಿದ್ದಲ್ಲಿ ಶಾಸಕರ ನಿವಾಸದ ಮುಂದೆ ಬಡಾವಣೆಯ ಜನರು ಧರಣಿ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ದೀಪಕ ಚಿದ್ರಿ ಅವರು ಮಾತನಾಡುತ್ತ, ಬೀದರ ಶಾಸಕರು ಕಳೆದ 15 ವರ್ಷಗಳಿಂದ ವಾರ್ಡ ಸಂಖ್ಯೆ 23 ರ ರಾಮನಗರ ಕಾಲೋನಿಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಆರಂಭಿಸುವುದಾಗಿ ಆಶ್ವಾಸನೆಗಳ ಮೇಲೆ ಆಸ್ವಾಸನೆಗಳು ಕೊಡುತ್ತಲೇ ಬಂದಿದ್ದಾರೆ. ಆದರೂ ಕಾಮಗಾರಿ ಮಾತ್ರ ಇನ್ನೂ ಆರಂಭಿಸಿಲ್ಲ ಎಂದರು

ವಿಶ್ವ ಕನ್ನಡಿಗರ ಸಂಸ್ಥೆಯ ಸುಬ್ಬಣ್ಣ ಕರಕನ್ನಳ್ಳಿ ಅವರು ಮಾತನಾಡಿ, ಮಾಜಿ ಮಂತ್ರಿಗಳು ಹಾಗೂ ಬೀದರ ಶಾಸಕರಾದ ರಹೀಮಖಾನ ಅವರು ರಾಮನಗರ ಬಡಾವಣೆಯ ನಾಗರಿಕರಿಗೆ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಕಾಮಗಾರಿ ಮಾತ್ರ ಆರಂಭಿಸಿಲ್ಲ. ಈ ಕೂಡಲೇ ಶಾಸಕರು ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಪತ್ರಿಭಟನಾ ಮೆರವಣಿಗೆಯಲ್ಲಿ ರಾಮನಗರ ಬಡಾವಣೆಯ ಸಂಗಪ್ಪಾ ಚಿದ್ರಿ, ಸಂಗೀತಾ ಚಿಮಕೋಡೆ, ಅಶೋಕ, ಸತ್ತಾರ, ಗೋವಿಂದ, ವಿಶ್ವನಾಥ, ರಾಮಕಿಶನ ಸೇರಿದಂತೆ ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ರಾಮನಗರ ಕಾಲೋನಿಯ ನೂರಾರು ಜನರು ಇದ್ದರು.