ವಾರ್ಡ್ ೮ : ೧೬೮ ನಕಲಿ ಮತದಾರರು – ಸಮೀಕ್ಷೆಗೆ ಒತ್ತಾಯ

 • ಪಕ್ಷೇತರ ಅಭ್ಯರ್ಥಿ ಮಹ್ಮದ್ ನೂರ್ – ಸಹಾಯಕ ಆಯುಕ್ತರಿಗೆ ದೂರು
  ರಾಯಚೂರು.ಮಾ.೨೩- ನಗರದ ವಾರ್ಡ್ ೮ ರ ಉಪ ಚುನಾವಣೆಯಲ್ಲಿ ಬೇರೆ ವಾರ್ಡಿನ ನಕಲಿ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿದ ಪ್ರಕರಣವೊಂದು ಈಗ ಬಹಿರಂಗವಾಗಿದೆ.
  ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾದ ಮಹ್ಮದ್ ನೂರ್ ಇವರು ೧೬೮ ನಕಲಿ ಮತದಾರರ ಮಾಹಿತಿಯನ್ನು ಸಹಾಯಕ ಆಯುಕ್ತರಿಗೆ ದೂರಿನ ರೂಪದಲ್ಲಿ ನೀಡಿದ್ದಾರೆ. ಬೂತ್ ನಂ.೪೩ ರಲ್ಲಿ ೧೬ ಮತದಾರರು, ಬೂತ್ ೪೪ ರಲ್ಲಿ ೪೬ ಮತದಾರರು, ಬೂತ್ ೪೫ ರಲ್ಲಿ ೬೯ ಮತದಾರರು ಹಾಗೂ ಬೂತ್ ೪೬ ರಲ್ಲಿ ಮೂವರು, ಬೂತ್ ೪೭ ರಲ್ಲಿ ೨, ಬೂತ್ ೪೮ ರಲ್ಲಿ ೩೨ ನಕಲಿ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಂದು ಮಾಹಿತಿ ನೀಡಲಾಗಿದೆ. ಈ ಎಲ್ಲರೂ ವಾರ್ಡ ನಂ.೮ ರಲ್ಲಿ ವಾಸಿಸುವವರಲ್ಲ. ಬೇರೆ ವಾರ್ಡಗಳಲ್ಲಿ ಇರುವವರನ್ನು ಇಲ್ಲಿಯೇ ಅಕ್ರಮವಾಗಿ ಹೆಸರು ಸೇರಿಸಲಾಗಿದೆ ಎನ್ನುವುದು ಅವರ ಆರೋಪವಾಗಿದೆ.
  ವಾರ್ಡ್ ೮ ಮತ್ತು ೧೧ ರ ಸದರಿ ಬಡಾವಣೆಗಳಲ್ಲಿ ಒಟ್ಟು ೧೬೮ ಜನ ನಕಲಿ ಮತದಾರರು ಕಂಡು ಬಂದಿದ್ದು, ಮತದಾರರ ಪಟ್ಟಿಯನ್ನು ಹಿಡಿದು, ಮನೆ ಮನೆ ಸಮೀಕ್ಷೆ ಕೈಗೊಂಡರೇ, ಸುಮಾರು ೭೦೦ ಕ್ಕೂ ಹೆಚ್ಚಿನ ಸಂಖ್ಯೆಯ ನಕಲಿ ಮತದಾರರು ಪತ್ತೆಯಾಗುವ ಸಾಧ್ಯತೆಗಳಿವೆಂದು ಆರೋಪಿಸಲಾಗಿದೆ. ಮಂಗಳವಾರ ಪೇಟೆ, ಮಡ್ಡಿಪೇಟೆ, ಲಾಲ್ ಪಹಡಿ, ವೀರಶೈವಕಲ್ಯಾಣ ಮಂಟಪ ಹತ್ತಿರ, ನಿಜಲಿಂಗಪ್ಪ ಕಾಲೋನಿ, ರಾಂಪೂರು ಬಡಾವಣೆಯಲ್ಲಿ ವಾಸವಾಗಿರುವ ಮತದಾರರು ವಾರ್ಡ್ ೮ ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
  ಈ ನಕಲಿ ಮತದಾರರಿಗೆ ಮತದಾನ ಮಾಡುವ ಹಕ್ಕು ನೀಡಬಾರದೆಂದು ಮನವಿ ಮಾಡಿದ್ದಾರೆ. ಅಲ್ಲದೇ, ೬ ಬೂತ್‌ಗಳಲ್ಲಿ ಮತದಾರರು ಪಟ್ಟಿ ಬದಲಾಯಿಸುವುದು ಕಂಡು ಬರುತ್ತದೆ. ಬೂತ್ ನಂ.೪೩ ರಲ್ಲಿ ಹಳೆ ಮತದಾರರನ್ವಯ ೮೮೭ ಮತದಾರರಿದ್ದರೇ, ಹೊಸ ಪಟ್ಟಿಯಲ್ಲಿ ೭೨೭ ಮತದಾರರೆಂದು ನಮೂದಿಸಲಾಗಿದೆ. ಬೂತ್ ನಂ.೪೪ ರಲ್ಲಿ ಹಳೆ ಮತದಾರರ ಪಟ್ಟಿಯಲ್ಲಿ ೪೪೧ ಮತದಾರರಿದ್ದರೇ, ಹೊಸ ಪಟ್ಟಿಯಲ್ಲಿ ೮೪೯ ಕ್ಕೆ ಈ ಸಂಖ್ಯೆ ಹೆಚ್ಚಾಗಿದೆ. ಬೂತ್ ೪೫ ರಲ್ಲಿ ಹಳೆ ಮತದಾರರ ಪಟ್ಟಿಯಲ್ಲಿ ೧೧೨೭ ಮತದಾರರ ಸಂಖ್ಯೆಯಿದ್ದರೇ, ಹೊಸ ಪಟ್ಟಿಯಲ್ಲಿ ೭೫೧ ಕ್ಕೆ ಕುಸಿದಿದೆ. ಬೂತ್ ೪೬ ರಲ್ಲಿ ೯೫೯ ಮತದಾರರಿದ್ದರೇ, ಹೊಸ ಪಟ್ಟಿಯಲ್ಲಿ ೭೬೪ ಮತದಾರರನ್ನು ನಮೂದಿಸಲಾಗಿದೆ. ಬೂತ್ ೪೭ ರಲ್ಲಿ ೯೫೭ ಹಳೆ ಪಟ್ಟಿಯ ಮತದಾರರಿದ್ದರೇ, ಹೊಸ ಪಟ್ಟಿಯಲ್ಲಿ ೭೮೦ ಮತದಾರರನ್ನು ನಮೂದಿಸಲಾಗಿದೆ. ಬೂತ್ ೪೮ ರಲ್ಲಿ ಹಳೆ ಪಟ್ಟಿಯನ್ವಯ ೧೩೩೯ ಜನರಿದ್ದರೇ, ಹೊಸ ಪಟ್ಟಿಯಲ್ಲಿ ೧೩೦೮ ಮತದಾರರಿದ್ದಾರೆ. ಹಳೆ ಪಟ್ಟಿಯಲ್ಲಿ ಒಟ್ಟು ೫೭೧೦ ಮತದಾರರಿದ್ದರೇ, ಹೊಸ ಪಟ್ಟಿಯಲ್ಲಿ ೫೧೭೯ ಮತದಾರರು ಇರುವುದಾಗಿ ತೋರಿಸಲಾಗುತ್ತದೆ.
  ಈ ರೀತಿ ಅಧಿಕಾರಿಗಳು ಬುದ್ಧಿವಂತಿಕೆಯಿಂದ ಯಾರಿಗೂ ಅನುಮಾನ ಬಾರದೆಂದು ಅಪರ, ತಪರ ಮಾಡಿದ್ದಾರೆ. ಇದರಲ್ಲಿ ಚುನಾವಣಾ ಸಿಬ್ಬಂದಿಗಳ ಹುನ್ನಾರವಿದೆ. ಇದಕ್ಕಾಗಿ ೨೦೧೩ ರಲ್ಲಿ ಇದ್ದ ಚುನಾವಣಾ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಬೇಕು. ಈ ಚುನಾವಣೆಗೆ ಹೊಸ ಮತ್ತು ಪ್ರಾಮಾಣಿಕ ಸಿಬ್ಬಂದಿಯನ್ನು ನೇಮಿಸಿ, ಪಾರದರ್ಶಕವಾಗಿ ಮತದಾನ ನಡೆಯುವಂತೆ ಮಾಡಬೇಕು. ಅಲ್ಲದೇ, ಶಾಂತಿಯುತವಾಗಿ ಈ ಚುನಾವಣೆ ನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.