ವಾರ್ಡ್ ೧೭ : ಕೆಮಿಕಲ್ ಸಿಂಪಡಿಸುವ ಮೂಲಕ ಸ್ಯಾನಿಟೈಜೇಷನ್

ರಾಯಚೂರು.ಮೇ.೨೨- ನಗರದ ವಾರ್ಡ್ ೧೭ ರಲ್ಲಿ ಇಂದು ರಾಸಾಯನಿಕ ಸ್ಯಾನಿಟೈಜೇಷನ್ ಪ್ರಕ್ರಿಯೆ ನಿರ್ವಹಿಸಲಾಯಿತು. ಸ್ವತಃ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸ್ಯಾನಿಟೈಜೇಷನ್ ನಿಗಾವಹಿಸಿ, ಅಧಿಕಾರಿಗಳಿಗೆ ಮಾರ್ಗಸೂಚನೆ ನೀಡಿದರು. ಕೆಲವೆಡೆಯಂತೂ ತಾವೇ ನೇರವಾಗಿ ಸ್ಯಾನಿಟೈಜರ್ ಪೈಪ್ ಹಿಡಿದು ಸಿಂಪಡನೆ ಮಾಡುವಂತಹ ಕಾರ್ಯವೂ ನಡೆಸಿದರು.
ನಂತರ ಅವರು ಮಾತನಾಡುತ್ತಾ, ರಾಯ್‌ಕ್ಯಾಮ್ ಔಷಧೋತ್ಪದನಾ ಕಂಪನಿ ಸಹಾಯಕದೊಂದಿಗೆ ಈ ಸ್ವಚ್ಛತೆ ಕಾರ್ಯ ನಿರ್ವಹಿಸಲಾಗುತ್ತಿದೆ. ವಾರ್ಡ್ ೧೭ ರ ನಗರಸಭೆ ಸದಸ್ಯರಾದ ಈ.ಶಶಿರಾಜ ಮತ್ತು ಸಂದೀಪ್ ಸಿಂಗನೋಡಿ ಇವರು ಸ್ಯಾನಿಟೈಜೇಷನ್ ನಿರ್ವಹಿಸುತ್ತಿದ್ದಾರೆ. ಈ ರೀತಿ ಎಲ್ಲಾ ಬಡಾವಣೆಗಳಲ್ಲೂ ಸ್ಯಾನಿಟೈಜೇಸನ್ ಮಾಡುವ ಕಾರ್ಯ ನಡೆಯಬೇಕು. ಇದರಿಂದ ಕೊರೊನಾ ವೈರಸ್ ನಾಶವಾಗುತ್ತದೆ. ಸ್ವಚ್ಛ ಪರಿಸರದಲ್ಲಿ ಕೊರೊನಾ ಹರಡುವಿಕೆ ತಡೆಯಲು ಸಾಧ್ಯವಾಗುತ್ತದೆ.
ರಾಯ್‌ಕ್ಯಾಮ್‌ನ ಪ್ರಹ್ಲಾದ ಕಳೆದ ವರ್ಷದಲ್ಲೂ ಕೆಮಿಕಲ್ ನೀಡುವ ಮೂಲಕ ಸ್ಯಾನಿಟೈಸ್‌ಗೆ ನೆರವಾಗಿದ್ದರು. ಮುಂದೆಯೂ ಸಹ ನಗರದಲ್ಲಿ ಸ್ಯಾನಿಟೈಜೇಷನ್‌ಗೆ ನೆರವಾಗುವ ಭರವಸೆ ನೀಡಿದ್ದಾರೆ. ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕು. ನಾಳೆ ವಾರ್ಡ್ ೧೯, ೨೦ ರಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮಾಜಿ ನಗರಸಭೆ ಸದಸ್ಯರಾದ ಯಲ್ಲಪ್ಪ ಮತ್ತು ಅಲ್ಲಿಯ ಸ್ಥಳೀಯ ಮುಖಂಡರು ಮುಂದಾಗಲಿದ್ದಾರೆ. ನಗರದ ಎಲ್ಲೆಡೆಯೂ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುತ್ತದೆಂದು ಹೇಳಿದ ಅವರು, ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬಾರದೇ, ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಸಹಕರಿಸಬೇಕು.
ಮಾಸ್ಕ್ ಧರಿಸುವುದು ಸೇರಿದಂತೆ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವಂತೆ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಸಭೆ ಸದಸ್ಯರಾದ ಈ.ಶಶಿರಾಜ, ಸಂದೀಪ್, ಪ್ರಹ್ಲಾದ, ಯಲ್ಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.