ವಾರ್ಡ್ ಹೆಚ್ಚಳ ವಿಧೇಯಕಕ್ಕೆ ಅಂಕಿತ

ಬೆಂಗಳೂರು, ಜ. ೮- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆಗಳನ್ನು ೧೯೮ ರಿಂದ ೨೪೩ಕ್ಕೆ ಹೆಚ್ಚಿಸುವ, ವಲಯ ಸಂಖ್ಯೆಗಳನ್ನು ೮ ರಿಂದ ೧೫ಕ್ಕೆ ಏರಿಸುವ ಅಂಶಗಳನ್ನು ಒಳಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ ನೂತನ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಬಿಬಿಎಂಪಿಯ ಈ ನೂತನ ವಿಧೇಯಕಕ್ಕೆ ಕಳೆದ ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಂಗೀಕಾರ ನೀಡಲಾಗಿತ್ತು.
ವಿಧಾನಮಂಡಲದಿಂದ ಅಂಗೀಕಾರಗೊಂಡ ಈ ಕಾಯ್ದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಕಳೆದ ಡಿ. ೧೯ ರಂದೆ ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಜ. ೧೧ ರಿಂದಲೇ ಈ ಕಾಯ್ದೆಯ ಉಪಬಂಧಗಳು ಜಾರಿಗೆ ಬರುತ್ತವೆ ಎಂದು ಕರ್ನಾಟಕ ರಾಜ್ಯದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ರಾಜ್ಯಪತ್ರದಲ್ಲಿ ಕಾಯ್ದೆಯನ್ನು ಪ್ರಕಟಿಸುವ ಮೂಲಕ ಬಿಬಿಎಂಪಿ ನೂತನ ಕಾಯ್ದೆ ಅಸ್ತಿತ್ವಕ್ಕೆ ಬಂದಂತಾಗಿದೆ. ಹಾಗಾಗಿ ಬಿಬಿಎಂಪಿಯ ಚುನಾವಣೆಗಳು ತಡವಾಗಲಿವೆ.
ವಾರ್ಡ್ ಪುನರ್ ವಿಂಗಡಣೆ, ಮೀಸಲಾತಿ ನಿಗದಿಗೆ ಸಾಕಷ್ಟು ಸಮಯ ಅಗತ್ಯ ಇರುವುದರಿಂದ ಇವೆಲ್ಲವೂ ಪೂರ್ಣಗೊಂಡ ನಂತರವೇ ಪಾಲಿಕೆ ಚುನಾವಣೆಗಳು ನಡೆಯಲಿದೆ.