ವಾರ್ಡು ಅಭಿವೃದ್ಧಿಯ ಪ್ರಣಾಳಿಕೆ ಬಿಡುಗಡೆ ಮಾಡಿದ ಸ್ವತಂತ್ರ ಅಭ್ಯರ್ಥಿ ಪ್ರಭಂಜನ್ ಕುಮಾರ್

ಬಳ್ಳಾರಿ ಏ 24 : ಚುನಾವಣಾ ಪ್ರಣಾಳಿಕೆಯನ್ನು ಪಕ್ಷಗಳು ಬಿಡುಗಡೆ ಮಾಡುವುದು ಸಹಜ. ಆದರೆ ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 3 ವಾರ್ಡಿನ ಸ್ವತಂತ್ರ ಅಭ್ಯರ್ಥಿ ಎಂ.ಪ್ರಭಂಜನ್ ಕುಮಾರ್ ತಮ್ಮನ್ನು ಆಯ್ಕೆ ಮಾಡಿದರೆ ಏನು‌ ಮಾಡುತ್ತೇನೆ ಎಂಬುದರ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿ ಗಮನ ಸೆಳೆದಿದ್ದಾರೆ.
ಪಾಲಿಕೆ ಮಾಜಿ ಸದಸ್ಯೆ ಪರ್ವಿನ್ ಬಾನು, ವಾರ್ಡ್ ನ ಮುಖಂಡ ಕಲೀಮ್
ಅವರಿಂದ ನಿನ್ನೆ ಸಂಜೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
ಪ್ರಣಾಳಿಕೆ ಬಿಡುಗಡೆ ‌ಮಾಡಿ ಮಾತನಾಡಿದ ಪರ್ವಿನ್ ಬಾನು, ಪಕ್ಷೇತರ ಅಭ್ಯರ್ಥಿ ಎಂ.ಪ್ರಭಂಜನ್ ಅವರು ಕಳೆದ ಎರಡು ವರ್ಷಗಳಿಂದ ನಮ್ಮ ವಾರ್ಡಿನಲ್ಲಿ ಸಕ್ರಿಯವಾಗಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳನ್ನು ಅರಿತಿದ್ದಾರೆ. ವಾರ್ಡಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ ಇಲ್ಲಿನ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಇಲ್ಲಿ ಜನರು ಅನುಭವಿಸುತ್ತಿರುವ ಮೂಲಭೂತ ಸೌಲಭ್ಯಗಳ ಬಗ್ಗೆಯೂ ಗಮನ ಹರಿಸಿರುವ ಅವರು, ಆ ಎಲ್ಲ ಸಮಸ್ಯೆಗಳೆಲ್ಲವನ್ನೂ ಸೇರಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದಾರೆಂದರು.
ಅಭ್ಯರ್ಥಿ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ವಾರ್ಡಿನಲ್ಲಿ ಹಾದು ಹೋಗಿರುವ ರಾಜಾ ಕಾಲುವೆ ತಡೆಗೋಡೆಗಳನ್ನು ನಿರ್ಮಿಸುವುದು. ಸಿಸಿ ರಸ್ತೆ ನಿರ್ಮಾಣ, ಸಂಪರ್ಕ ರಸ್ತೆಗಳ ಅಭಿವೃದ್ಧಿ, ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ವಾರ್ಡ್‌ ನ ವಿವಿಧೆಡೆ ಶುದ್ಧ ಕುಡಿವ ನೀರಿನ ಘಟಕಗಳ ನಿರ್ಮಾಣ ಮಾಡುವುದು. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿಸುವುದರ ಜತೆಗೆ ನಿರ್ಮಾಣಕ್ಕೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಾರ್ಡಿನಲ್ಲಿ ಕಚೇರಿ ಆರಂಭ:
ವಾರ್ಡಿನಲ್ಲಿ ಕಚೇರಿಯನ್ನು ತೆರೆದು, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಮನೆಗೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಮಾಸಾಶನ, ಆಧಾರ್ ಕಾರ್ಡ್, ಗುರುತಿನ ಚೀಟಿ, ವಿದ್ಯಾರ್ಥಿ ವೇತನ ಸೇರಿ ಇನ್ನಿತರೆ ಸೌಲಭ್ಯಗಳಿಗೆ ಅರ್ಜಿ ಹಾಕಿಸಲು ಸಹಕಾರ ನೀಡಲಾಗುವುದು. ವಾರ್ಡ್‌ ನ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ದೀಪ, ಬೀದಿ ಬದಿ ವಿದ್ಯುತ್ ಕಂಬಗಳಿಗೆ ಎಲ್‌ಇಡಿ ಬಲ್ಬ್ ಗಳನ್ನು ಅಳವಡಿಸಲಾಗುವುದು. ವಿವಿಧ ನಿಗಮ ಮಂಡಳಿಗಳಿಂದ ಸಬ್ಸಿಡಿ ಸಾಲ ಸೌಲಭ್ಯ ಕೊಡಿಸುವಲ್ಲಿ ಅಗತ್ಯ ಸಹಕಾರ ನೀಡಲಾಗುವುದು. ಮಹಿಳೆಯರ ಸುರಕ್ಷತೆ ಬಗ್ಗೆ ನಿಗಾವಹಿಸುವುದು. ಮತ್ತು ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು. ವಿಕಲ ಚೇತನರಿಗೆ (ಅಂಗವಿಕಲರಿಗೆ) ತ್ರಿಚಕ್ರ ವಾಹನ ಸರ್ಕಾರದಿಂದ ಕೊಡಿಸಲು ಸಹಕರಿಸುವುದರ ಜತೆಗೆ ಅವರಿಗೆ ಜೀವನೋಪಾಯ ಕಲ್ಪಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.