ವಾರ್ಡಗಳಲ್ಲೂ ಕೋವಿಡ್ ಲಸಿಕೆ ನೀಡಲು ಡಿ.ಸಿ ಸೂಚನೆ

ಬೀದರ.ಮಾ.31: ಬ್ರಿಮ್ಸನಲ್ಲಿ ನಡೆಸಿದ ಮಾದರಿಯಲ್ಲಿಯೇ ಇನ್ನುಳಿದ ಎಲ್ಲಾ ಕಡೆಗಳಲ್ಲೂ ಕೋವಿಡ್ ಲಸಿಕೆ ನೀಡಿಕೆಯ ವಿಶೇಷ ಕಾರ್ಯಾಚರಣೆ ನಡೆಸಿ ಕೋವಿಡ್ ಲಸಿಕೆ ನೀಡಿಕೆಯನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿನಲ್ಲಿ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಮಾರ್ಚ 30ರಂದು ಬ್ರಿಮ್ಸ ಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಒಂದೇ ದಿನಕ್ಕೆ 650 ಜನರಿಗೆ ಲಸಿಕೆ ನೀಡಿದ ಪ್ರಯತ್ನಕ್ಕೆ ಸೋಷಿಯಲ್ ಮೀಡಿಯಾದ ಮೂಲಕವೂ ಉತ್ತಮ ಸಹಕಾರ ಸಿಕ್ಕಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ಪಟ್ಟಣ ಮತ್ತು ನಗರ ಪ್ರದೇಶಗಳ ಎಲ್ಲಾ ವಾರ್ಡಗಳಲ್ಲಿ ಕೊವಿಡ್ ಲಸಿಕೆ ನೀಡಿಕೆ ವಿಶೇಷ ಕಾರ್ಯಾಚರಣೆಗೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ತಂಡವಾಗಿ ಕೆಲಸ ನಿರ್ವಹಿಸಿ: ಅಧಿಕಾರಿಗಳು ತಂಡವಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ಮಾಡಿದ ಜಿಲ್ಲಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಬಿಎಲ್‍ಓ ಕೆಲಸ ನಿರ್ವಹಿಸುವ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರ ಸಹಕಾರ ಪಡೆದು ಲಸಿಕೆ ನೀಡಿಕೆ ಕಾರ್ಯದ ಪ್ರಗತಿಯನ್ನು ವಾರ್ಡವಾರು ನಡೆಸಬೇಕು. ಲಸಿಕೆ ನೀಡಿಕೆ ಪ್ರಗತಿಯು ವೈಯಕ್ತಿಕವಾರು ನಡೆಸಲು ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
ಜನರಿರುವ ಕಡೆಗೆ ಹೋಗಿ: ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಕಾರ್ಯವ್ಯಾಪ್ತಿಯಲ್ಲಿ ಜನರು ಇರುವ ಕಡೆಗೆ ಹೋಗಿ ತಾವುಗಳು ಕಾರ್ಯ ನಿರ್ವಹಿಸಬೇಕು. ರಾಜ್ಯಮಟ್ಟದಲ್ಲಿ ಕೊಡುವ ಕೊವಿಡ್ ಟೆಸ್ಟ್ ಗುರಿ ಸಾಧನೆಗೆ ಎಲ್ಲರೂ ಸಹಕರಿಸಬೇಕು. ಆಸ್ಪತ್ರೆಗಳಲ್ಲಷ್ಟೇ ಅಲ್ಲ, ಜಾತ್ರೆ, ಮಾರುಕಟ್ಟೆ ಪ್ರದೇಶಗಳಿಗೂ ಹೋಗಿ ಅಲ್ಲಿ ಸ್ವ್ಯಾಬ್ ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದು ಎಲ್ಲ ತಾಲೂಕು ಆಸ್ಪತ್ರೆಗಳ ಮತ್ತು ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಜಹೀರಾ ನಸೀಮ್ ಅವರು ಮಾತನಾಡಿ, ತಮ್ಮ ತಮ್ಮ ಹಂತದಲ್ಲಿ ಗುರಿ ಇಟ್ಟುಕೊಂಡು ಅದೆ ರೀತಿ ಕೆಲಸ ನಿರ್ವಹಿಸಬೇಕು. ಗ್ರಾಮಮಟ್ಟದಲ್ಲಿ ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಬ್ರಿಮ್ಸ ನಿರ್ದೇಶಕರಾದ ಡಾ.ಶಿವಕುಮಾರ, ಡಿಎಚ್‍ಓ ಡಾ.ವಿ.ಜಿ.ರೆಡ್ಡಿ ಹಾಗೂ ಇತರರು ಇದ್ದರು.