ವಾರಿಯರ್ಸ್‍ಗಳಿಗಾಗಿಯೇ ಕೋವಿಡ್ ಕೇರ್ ಸೆಂಟರ್

????????????????????????????????????

ಚಾಮರಾಜನಗರ, ಏ.30- ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕರ್ತವ್ಯದಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್‍ಗಳು, ಮುಂಚೂಣಿ ಕಾರ್ಯಕರ್ತರು ಕೋವಿಡ್ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಚಿಕಿತ್ಸೆಗೆ ಅನುವಾಗುವಂತೆ ನಗರದ ಮಾದಾಪುರದಲ್ಲಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಮೀಸಲಿಡಲಾಗಿದೆ.
ಕೊರೊನಾ ಸೋಂಕಿತರಿಗಾಗಿ ಜಿಲ್ಲೆಯಲ್ಲಿ ನಾನಾ ಕಡೆ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಪೈಕಿ ನಗರದ ಮಾದಾಪುರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್ ನಲ್ಲಿಯೂ ಸಹ ಕೋವಿಡ್ ಕೇಂದ್ರ ಸಜ್ಜುಗೊಳಿಸಲಾಗಿದೆ. ಕೊರೊನಾ ವಾರಿಯರ್ಸ್‍ಗಳಿಗಾಗಿಯೇ ಈ ಕೋವಿಡ್ ಕೇರ್ ಸೆಂಟರ್ ಸೌಲಭ್ಯ ಒದಗಿಸುವ ಮೂಲಕ ಚಾಮರಾಜನಗರ ಜಿಲ್ಲೆ ಕೊರೊನಾ ವಾರಿಯರ್ಸ್‍ಗಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸೌಕರ್ಯ ನೀಡಿ ರಾಜ್ಯದಲ್ಲೇ ಮೊದಲು ಎನಿಸಿದೆ.
ಕೋವಿಡ್ ಸೋಂಕು ತಡೆಗಾಗಿ, ವಿವಿಧ ಇಲಾಖೆಗಳು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಹಲವಾರು ಅಧಿಕಾರಿ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕರ್ತವ್ಯದ ಅವಧಿಯಲ್ಲಿ ಅನೇಕರು ಕೋವಿಡ್ ಸೋಂಕಿಗೆ ಒಳಗಾಗುತ್ತಿರುವ ಸಂದರ್ಭಗಳು ಹೆಚ್ಚುತ್ತಿವೆ. ಇಂತಹ ವೇಳೆ ಕೊರೊನಾ ವಾರಿಯರ್ಸ್‍ಗಳಿಗೆ ನೆರವಾಗಿ ಆತ್ಮಸ್ತೈರ್ಯ ತುಂಬುವ ನಿಟ್ಟಿನಲ್ಲಿ ಕೋವಿಡ್ ಕೇಂದ್ರವನ್ನು ಬಳಸಿಕೊಳ್ಳಲಾಗುತ್ತಿದೆ.
ಕೋವಿಡ್ ಕೇರ್ ಕೇಂದ್ರದಲ್ಲಿ ಒಟ್ಟು 19 ಕೊಠಡಿಗಳಿದ್ದು 56 ಹಾಸಿಗೆಗಳು ಲಭ್ಯವಿದೆ. ಈ ಪೈಕಿ 50 ಹಾಸಿಗೆಗಳನ್ನು ಕೊರೊನಾ ವಾರಿಯರ್ಸ್‍ಗಳಿಗಾಗಿ ಇಡಲಾಗಿದೆ. ಸ್ನಾನಕ್ಕಾಗಿ ಸೋಲಾರ್ ವ್ಯವಸ್ಥೆ, ಕುಡಿಯಲು ಬಿಸಿನೀರು ಸೌಲಭ್ಯವಿದೆ. ಟಿ.ವಿ ಅಳವಡಿಸಲಾಗಿದೆ. ಯು.ಪಿ.ಎಸ್ ವ್ಯವಸ್ಥೆಯೂ ಲಭ್ಯವಿದೆ.