ವಾರಾಂತ್ಯ ಲಾಕ್‍ಡೌನ್ ಕಲಬುರಗಿ ನಗರ ಭಣಭಣ

ಕಲಬುರಗಿ ಏ 25: ರಾಜ್ಯ ಸರಕಾರ ವಾರಾಂತ್ಯದ ಲಾಕ್‍ಡೌನ್ ಘೋಷಿಸಿದ ಎರಡನೆಯ ದಿನವಾದ ಇಂದೂ ಸಹ ಕಲಬುರಗಿ ನಗರದಲ್ಲಿ ಸಕಲ ವ್ಯವಹಾರಗಳು ಸ್ಥಗಿತಗೊಂಡು ಇಡೀ ನಗರ ಭಣಗುಟ್ಟುತ್ತಿದೆ.
ಸದಾ ಜನಸಂಚಾರ, ವಾಹನಗಳಿಂದ ಗಿಜಿಗುಡುತ್ತಿದ್ದ ಸುಪರ್ ಮಾರುಕಟ್ಟೆ ,ಸರದಾರ ವಲ್ಲಭಭಾಯಿ ಪಟೇಲ ವೃತ್ತ, ಕೇಂದ್ರ ಬಸ್ ನಿಲ್ದಾಣ,ನೆಹರು ಗಂಜ್,ಕಿರಾಣಾ ಬಜಾರ್ ಮೊದಲಾದ ಪ್ರದೇಶಗಳು ಚಟುವಟಿಕೆಯಿಲ್ಲದೇ ಬಿಕೋ ಎನ್ನುತ್ತಿವೆ.
ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಶ್ಯಕ ವಸ್ತುಗಳ ಖರೀದಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರಿಂದ ಜನ ಕಿರಾಣಿ ಸಾಮಾನು, ಹಾಲು ಹಣ್ಣು, ತರಕಾರಿ ಖರೀದಿಗೆ ಸಮೀಪದ ಅಂಗಡಿ ಮುಂಗಟ್ಟು ಮತ್ತು ಮಾರುಕಟ್ಟೆಗಳಿಗೆ ತೆರಳಿದರು.
ರಸ್ತೆಯಲ್ಲಿ ಅನಾವಶ್ಯಕವಾಗಿ ಅಡ್ಡಾಡುತ್ತಿದ್ದ ಜನರನ್ನು ಸಂಚಾರಿ ಪೊಲೀಸರು ತಡೆದು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದರು.
Àಹಲವಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು.ಅಗತ್ಯ ಕಾರ್ಯಗಳಿಗೆ ಹೋಗುತ್ತಿದ್ದವರ ಐಡೆಂಟಿಟಿ ಕಾರ್ಡು ಪರಿಶೀಲಿಸಿ ಕಳಿಸಲಾಯಿತು.ಕೋವಿಡ್ ಎರಡನೆಯ ಅಲೆಯ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಯಾರಿಗೂ ಕಫ್ರ್ಯೂ ಪಾಸ್ ನೀಡಿಲ್ಲ. ಹಳೆಯ ಪಾಸ್ ವಾಹನಕ್ಕೆ ಅಂಟಿಸಿಕೊಂಡು ಹೊರಟಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬರನ್ನು ಪೊಲೀಸರು ತಡೆದು ಪ್ರಶ್ನಿಸಿದರು.
ಸಂಚಾರಿ ಎಸಿಪಿ ಸುಧಾ ಆದಿ, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಎಸ್,ಆರ್ ನಾಯಕ, ಬಸವರಾಜ ತೇಲಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿದರು.
ಮೆಡಿಕಲ್ ಶಾಪ್,ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.