ವಾರಾಂತ್ಯ ಲಾಕ್‌ಡೌನ್‌ಗೆ ಸಿದ್ಧತೆ


ಬೆಂಗಳೂರು,ಏ.೨೨- ರಾಜ್ಯದಲ್ಲಿ ಕೊರೊನಾ ತಡೆಯಲು ರಾತ್ರಿ ಕರ್ಫ್ಯೂವನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ.
ನಾಳೆ ರಾತ್ರಿಯಿಂದ ಎರಡು ದಿನ ವಾರಾಂತ್ಯ ಲಾಕ್‌ಡೌನ್‌ಗೂ ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆಗೆ ಪರಿಸ್ಥಿತಿಯ ಅರಿವಾಗಿದೆ. ಹಾಗಾಗಿ, ರಾತ್ರಿ ಕರ್ಫ್ಯೂ ಯಶಸ್ವಿಯಾಗಲು ಸಹಕಾರ ನೀಡಿದ್ದಾರೆ ಎಂದರು.
ನಾಳೆ ರಾತ್ರಿಯಿಂದ ಎರಡು ದಿನ ವಾರಾಂತ್ಯ ಲಾಕ್‌ಡೌನ್‌ಗೂ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಹಿಂದೆ ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಕೈಗೊಂಡ ಬಿಗಿ ಕ್ರಮಗಳನ್ನು ವಾರಾಂತ್ಯ ಲಾಕ್‌ಡೌನ್ ಸಂದರ್ಭದಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಅತ್ಯಂತ ವೇಗವಾಗಿ ಸೋಂಕು ಹರಡಿದ್ದರಿಂದ ಸ್ವಲ್ಪ ತೊಂದರೆಯಾಗಿದೆ. ಎಲ್ಲವನ್ನೂ ಸರಿಪಡಿಸುವ ಕೆಲಸ ನಡೆದಿದೆ ಎಂದರು.
ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಈಗಾಗಲೇ ವಲಯವಾರು ಐಜಿಗಳ ಜತೆಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದೇವೆ ಎಂದವರು ಹೇಳಿದರು.
ಬೆಂಗಳೂರು ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಜಂಟಿ ಪರಿಶೀಲನೆ ತಪಾಸಣೆಗೆ ಡಿಸಿಪಿಗಳನ್ನು ನಿಯೋಜಿಸಬೇಕು ಎಂದು ಬಿಬಿಎಂಪಿ ಆಯುಕ್ತರು ಕೋರಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಕೊರೊನಾ ಸೋಂಕಿತರ ಅಂತ್ಯಕ್ರಿಯೆಗಾಗಿ ಬೆಂಗಳೂರಿನ ಹೊರ ವಲಯದಲ್ಲಿ ಕಂದಯ ಸಚಿವ ಆರ್. ಅಶೋಕ್ ಜಾಗ ನಿಗದಿ ಮಾಡಿದ್ದಾರೆ. ಇನ್ನು ೨-೩ ದಿನಗಳಲ್ಲಿ ಇಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಸ್ಥಳಕ್ಕೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದರು.
ಕೊರೊನಾ ನಿಯಂತ್ರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ನಿರ್ದೇಶನ ನೀಡಿದ್ದಾರೆ. ಪ್ರತಿಯೊಬ್ಬ ಸಚಿವರುಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸದ್ಯದಲ್ಲೇ ಎಲ್ಲವೂ ಒಂದು ಹಂತಕ್ಕೆ ಬಂದು ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ ಎಂಬ ವಿಶ್ವಾಸವನ್ನು ಅವರು ಸ್ಪಷ್ಟಪಡಿಸಿದರು.