ವಾರಾಂತ್ಯ ಕರ್ಫ್ಯೂ ರಾಜ್ಯ ಬಹುತೇಕ ಸ್ತಬ್ಧ

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಕಮರ್ಷಿಯಲ್ ಸ್ಟ್ರೀಟ್ ಜನರಿಲ್ಲದೆ ಬಿಕೋ ಎನ್ನುತ್ತಿರುವುದು.

ಬೆಂಗಳೂರು, ಜ.೧೫- ಸಂಕ್ರಾಂತಿ ಸಂಭ್ರಮದ ಸಡಗರ ನಡುವೆ ರಾಜ್ಯಾದ್ಯಂತ ಇಂದಿನಿಂದ ಎರಡು ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಅನ್ವಯ ವಾರಾಂತ್ಯ ಕರ್ಫ್ಯೂ ಚಾಲ್ತಿಯಲ್ಲಿದ್ದು, ಜನಜೀವನ ಬಹುತೇಕ ಸ್ತಬ್ಧ ಗೊಂಡಿದೆ.
ಕೋವಿಡ್ ಮೂರನೇ ಅಲೆ ಹಿನ್ನೆಲೆ ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ಕರ್ನಾಟಕ ವ್ಯಾಪ್ತಿಯಲ್ಲಿ ಸತತ ಎರಡನೇ ವಾರದ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ರಾಜಧಾನಿ ಬೆಂಗಳೂರು ಒಳಗೊಂಡಂತೆ ಜಿಲ್ಲಾ ಕೇಂದ್ರಗಳು ಜನಜಂಗುಳಿ ಇಲ್ಲದೆ ಬಿಕೋ ಎನ್ನುತ್ತಿದೆ.
ಇನ್ನೂ, ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಆರಂಭಗೊಂಡಿದೆ. ಶನಿವಾರ ಬೆಳಿಗ್ಗೆ ಆಸ್ಪತ್ರೆ, ಔಷಧಿ ಅಂಗಡಿ, ಕಿರಾಣಿ ಅಂಗಡಿ, ತರಕಾರಿ, ಹಣ್ಣು-ಹಂಪಲು, ಎಳೆನೀರು ಮತ್ತು ಹೂವಿನ ಅಂಗಡಿಗಳು ಎಂದಿನಂತೆ ತೆರೆದಿದ್ದವು.
ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಕಡಿಮೆ ಬಸ್‌ಗಳ ಸಂಚಾರ ಮತ್ತು ಎಪಿಎಂಸಿ ಕಚೇರಿಯಲ್ಲಿ ವ್ಯಾಪಾರ-ವಹಿವಾಟು ನಡೆಯಿತು. ಆದರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಯ ನಡುವೆಯೂ ನಗರದ ಪ್ರಮುಖ ರಸ್ತೆಗಳು ಮೇಲ್ಸೇತುವೆಗಳು ಸೇರಿದಂತೆ ಎಲ್ಲವೂ ಖಾಲಿ ಖಾಲಿ ಹೊಡೆಯುತ್ತಿವೆ. ಇದರ ನಡುವೆಯೂ ಕೆಲವರು ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆಯೂ ನಡೆದಿದೆ.
ನಗರದ ಟೌನ್ ಹಾಲ್ ,ಮೆಜೆಸ್ಟಿಕ್, ಮೈಸೂರ್ ರಸ್ತೆ, ತುಮಕೂರು ರಸ್ತೆ ,ಬಳ್ಳಾರಿ ರಸ್ತೆ ಸೇರಿದಂತೆ ನಗರದ ಮೂಲೆ ಮೂಲೆಗಳಲ್ಲಿ ಜನರು ಕುಂಟು ನೆಪ ಹೇಳಿ ಸವಾರರು ರಸ್ತೆಗಿಳಿದಿದ್ದ ಅವರನ್ನು ಪೊಲೀಸರು ತಪಾಸಣೆ ಮಾಡಿ ಸೂಕ್ತ ಕಾರಣಗಳೊಂದಿಗೆ ಆಗಮಿಸಿದ ಮಂದಿಗೆ ಅವಕಾಶ ಮಾಡಿಕೊಟ್ಟು ಉಳಿದವರನ್ನು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಬ್ಬು ಕಡಲೆಕಾಯಿ ಗೆಣಸು ಹಣ್ಣು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಖರೀದಿ ಮಾಡುವ ಪ್ರಕ್ರಿಯೆಯೂ ಸಾಗಿತ್ತು. ಆದರೆ ಖರೀದಿ ಮಾಡುವವರ ಸಂಖ್ಯೆ ತೀರಾ ವಿರಳವಾಗಿತ್ತು.
ಬೆಂಗಳೂರಿನ ಕೆಆರ್ ಮಾರುಕಟ್ಟೆ ಯಶವಂತಪುರ ಮಾರುಕಟ್ಟೆ ಮಲ್ಲೇಶ್ವರ ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಜನರ ನಿಯಂತ್ರಣಕ್ಕೆ ಕಡಿವಾಣ ಹಾಕಿದ್ದಾರೆ.
ಅಗತ್ಯ ಕೆಲಸಕಾರ್ಯಗಳಿಗೆ ತೆರಳುವ ಮಂದಿ ಬೆರಳೆಣಿಕೆಯ ಬಸ್ಸುಗಳಿಗಾಗಿ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ವಂತ ವಾಹನ ಇರುವ ಜನರು ಸೂಕ್ತ ಕಾರಣಗಳು ಹಾಗೂ ದಾಖಲೆಗಳೊಂದಿಗೆ ನಿಗದಿತ ಕೆಲಸಕ್ಕೆ ತೆರಳುತ್ತಿದ್ದ ದೃಶ್ಯ ಕಂಡುಬಂತು.
ಹೂ,ಹಣ್ಣುಗಳು ತರಕಾರಿ ಸೇರಿದಂತೆ ಇತರ ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ನಿರ್ಬಂಧವಿಲ್ಲ ಉಳಿದಂತೆ ಅನಗತ್ಯವಾಗಿ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ.

ಪೊಲೀಸರು ತಪಾಸಣೆ:
ಅನಗತ್ಯವಾಗಿ ರಸ್ತೆಗಿಳಿದ ಮಂದಿಯನ್ನು ತಪಾಸಣೆ ಮಾಡುವ ಉದ್ದೇಶದಿಂದ ಪೊಲೀಸರು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಚೆಕ್ಪೋಸ್ಟ್ ಗಳನ್ನು ತೆರೆದಿದ್ದಾರೆ.
ರಸ್ತೆಗಿಳಿದ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕಳುಹಿಸುತ್ತಿದ್ದ ಘಟನೆ ಹಲವು ಕಡೆ ಕಂಡುಬಂದಿದೆ.
ಮತ್ತೊಂದೆಡೆ ಪೊಲೀಸರು ರಸ್ತೆಗಳಲ್ಲಿ ಸಂಚಾರ ನಡೆಸಿ, ಧ್ವನಿವರ್ಧಕದ ಮೂಲಕ ವಾರಾಂತ್ಯ ಕರ್ಫ್ಯೂ ನಿಯಮ ಪಾಲಿಸುವಂತೆ ಮನವಿ ಮಾಡಿದರು. ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಎಂದು ಕೋವಿಡ್ ಕುರಿತು ಜಾಗೃತಿ ಮೂಡಿಸಿದರು.
ರಾಜಧಾನಿ : ನಿತ್ಯ ಜನಜಂಗುಳಿಯಿಂದ ಕೂಡಿದ್ದ ಮೆಜೆಸ್ಟಿಕ್ ಪ್ರಯಾಣಿಕರಿಲ್ಲದೆ ಬಿಕೋ ಎನ್ನುವ ದೃಶ್ಯ ಕಂಡಿತು. ಬಿಎಂಟಿಸಿ ಬಸ್‌ಗಳ ಸಂಖ್ಯೆಯೂ ತೀರ ಕಡಿಮೆ ಇದ್ದ ಕಾರಣ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿತ್ತು. ಕೇವಲ ತುರ್ತು ಸೇವೆಗಷ್ಟೇ ಅವಕಾಶ ಕಲ್ಪಿಸಲಾಗಿದ್ದು, ಭಾಗಶಃ ಬಸ್‌ಗಳು ಘಟಕಗಳಲ್ಲಿ ನಿಂತಿದ್ದವು.

ಮೆಟ್ರೋ ಲಭ್ಯ :
ವೀಕೆಂಡ್ ಕರ್ಫ್ಯೂ ಇದ್ದರೂ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಜನರ ತುರ್ತು ಸೇವೆಗಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಇನ್ನೂ ಸಮಯ ಬದಲಾವಣೆ ಮಾಡಲಾಗಿದ್ದು, ಇಂದು ಬೆಳಗ್ಗೆ ೮ ಗಂಟೆಯಿಂದ ಮೆಟ್ರೋ ಓಡಾಟ ಪ್ರಾರಂಭವಾಗಿದ್ದು, ರಾತ್ರಿ ೯ ಗಂಟೆಯವರೆಗೆ ಇರಲಿದೆ. ೨೦ ನಿಮಿಷಕ್ಕೊಂದು ಮೆಟ್ರೋ ಓಡಿಸಲಾಗುತ್ತಿದೆ.
ಪ್ರಮುಖವಾಗಿ ಜ.೧೪ರ ರಾತ್ರಿ ೧೦ ಗಂಟೆಯಿಂದ ಜ. ೧೭ರ ಬೆಳಿಗ್ಗೆ ೫ ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ.