ವಾರಾಂತ್ಯ ಕಫ್ರ್ಯೂಗೆ ಮೈಸೂರು ಅಕ್ಷರಶಃ ಸ್ತಬ್ಧ

ಮೈಸೂರು: ಏ.25: ಕೋವಿಡ್ ನಿಯಂತ್ರಣಕ್ಕೆ ವಾರಾಂತ್ಯ ಕಫ್ರ್ಯೂ ವಿಧಿಸಲಾಗಿದ್ದು, ಭಾನುವಾರವಾದ ಇಂದು ಅರಮನೆ ನಗರಿ ಮೈಸೂರು ಅಕ್ಷರಶಃ ಸ್ತಬ್ಧವಾಗಿದೆ.
ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಕಫ್ರ್ಯೂ ಜಾರಿಗೊಂಡಿದ್ದು, ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಇಂದು ಬೆಳಿಗ್ಗೆ 6ಗಂಟೆಯಿಂದ ನಗರದಲ್ಲಿ 10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜನರು ಹಾಗೂ ವಾಹನಗಳ ಓಡಾಟ ಕ್ಷೀಣಿಸಿರುವುದು ಕಂಡುಬಂತು. 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಡಲಾಗಿತ್ತು. ಬಳಿಕ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ಕಾರ್ಯಕ್ಕೆ ಪೆÇಲೀಸರು ಮುಂದಾದರು. ಸಣ್ಣಪುಟ್ಟ ಹೋಟೆಲ್ ಗಳಲ್ಲಿಯೂ ಬೆಳಿಗ್ಗೆ 10ಗಂಟೆಯವರೆಗೆ ಪಾರ್ಸಲ್ ಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಸದಾ ವಾಹನಗಳ ಸಂಚಾರದಿಂದ ಗಿಜಿಗುಡುತ್ತಿದ್ದ ಮೈಸೂರಿನಲ್ಲಿ ಬೆರಳೆಣಿಕೆ ವಾಹನಗಳಷ್ಟೇ ರಸ್ತೆಗಿಳಿದಿದ್ದವು.
ಮೈಸೂರಿನ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ನೀರವ ಮೌನ ಆವರಿಸಿತ್ತು. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕರಸ್ತೆ ಸೇರಿದಂತೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ 10 ಗಂಟೆ ನಂತರ ಅಗತ್ಯ ವಸ್ತುಗಳ ಮಳಿಗೆಗಳಿಗೂ ಬೀಗ ಜಡಿಯಲಾಗಿತ್ತು.
ಪ್ರಮುಖ ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಪೆÇಲೀಸರು ಬ್ಯಾರಿಕೇಡ್ ಅಳವಡಿಸಿ ಕಾವಲು ಕಾಯುತ್ತಿದ್ದರು. ಅಲ್ಲೊಂದು ಇಲ್ಲೊಂದು ದ್ವಿಚಕ್ರವಾಹನ, ರಿಕ್ಷಾ ಸಂಚಾರ ಬಿಟ್ಟರೆ ಖಾಸಗಿ ವಾಹನಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿತ್ತು. ನಗರದಲ್ಲಿ ಬಸ್ ಗಳೂ ಸಂಚರಿಸಿರಲಿಲ್ಲ. ಮುಂಗಡ ಟಿಕೇಟ್ ಕಾಯ್ದಿರಿಸಿದ್ದ ದೂರದ ಊರುಗಳಿಗೆ ಪ್ರಯಾಣಿಸುವ ಬಸ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ವೀಕೆಂಡ್ ಕಫ್ರ್ಯೂ ಇದೆ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ತಾವೆಲ್ಲಿ ಮಧ್ಯ ಸಿಲುಕಿಕೊಂಡು ಬಿಡುತ್ತೆವೆಯೋ ಎಂದು ಹಲವರು ಪ್ರಯಾಣಿಕರು ಪ್ರಯಾಣಕ್ಕೆ ಹಿಂದೇಟು ಹಾಕಿದ್ದು ಕಂಡು ಬಂತು. ಮೈಸೂರು ನಗರದ ಸುತ್ತಲೂ ಖಾಕಿಯ ಸರ್ಪಗಾವಲು ಕಂಡು ಬಂತು.
ಅವಧಿ ಮುಗಿಯುತ್ತಲೇ ಅಂದರೆ ಬೆಳಿಗ್ಗೆ 10ಗಂಟೆಯಾಗುತ್ತಲೇ ತರಕಾರಿ, ಹಣ್ಣು, ದಿನಸಿ ವ್ಯಾಪಾರ ವಹಿವಾಟು ಅಂತ್ಯವಾಗಿದ್ದು, ಖಾಕಿ ಪಡೆ ಕಾರ್ಯಾಚರಣೆಗಿಳಿದಿತ್ತು. ಎಲ್ಲ ವ್ಯವಹಾರಗಳನ್ನು ನಿರ್ಬಂಧಿಸಲಾಗಿದ್ದು, ಮುಂಜಾನೆ ವ್ಯಾಪಾರ ನಡೆಸಿ ವರ್ತಕರು ಮಳಿಗೆಗೆ ಶೇಟರ್ ಎಳೆದರು. ದೇವರಾಜ ಮಾರುಕಟ್ಟೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲ ಕಡೆಯೂ ಸ್ತಬ್ಧಗೊಂಡಿದ್ದು, ಅಂಗಡಿ ಮುಚ್ಚಿ ಮನೆಗಳಿಗೆ ತೆರಳಿದರು. ವೀಕೆಂಡ್ ಕಫ್ರ್ಯೂ ಈಗಾಗಲೇ ಪ್ರಾರಂಭವಾಗಿದ್ದು, ಗಂಟುಮೂಟೆ ಸಮೇತ ತಮ್ಮ ನಿವಾಸಗಳತ್ತ ವ್ಯಾಪಾರಸ್ಥರು ತೆರಳುತ್ತಿದ್ದಾರೆ. ವೀಕೆಂಡ್ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
ಮೈಸೂರಿನ ಪ್ರಮುಖ ವೃತ್ತ, ರಸ್ತೆಗಳಲ್ಲಿ ವ್ಯವಸ್ಥೆ ವೀಕ್ಷಣೆ ನಡೆಸಿದರು. ಅನಗತ್ಯವಾಗಿ ಓಡಾಡುವವರ ಮೇಲೆ ಕಣ್ಣಿಡಲು ಸಿಬ್ಬಂದಿಗೆ ಸೂಚನೆ ನೀಡಿದರು ಬೆಳಿಗ್ಗೆ 10ಗಂಟೆ ವರಗೆ ಕೆಲವು ತುರ್ತು ಅವಶ್ಯಕತೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಗತ್ಯ ವಸ್ತು ಖರೀದಿಗೆ 10ಗಂಟೆಯ ವರಗೆ ಅವಕಾಶ ಮಾಡಿಕೊಡಲಾಗಿತ್ತು.
ಹಾಲು, ಪೆಟ್ರೋಲ್, ಡೀಸಲ್, ಹಣ್ಣು ಹಾಗೂ ಇನ್ನಿತರ ಕೆಲವೇ ಅವಶ್ಯಕ ವಸ್ತುಗಳಿಗೆ ಬಂಧನ ಬಿಸಿ ತಟ್ಟಿರಲಿಲ್ಲಹಾಗಾಗಿ ನಗರದ ವಿವಿದೆಡೆ ಇವೆಲ್ಲದರ ವಹಿವಾಟು ಎಂದಿನಂತ್ತಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಹಳ ಕಡಿಮೆ ಮಟ್ಟದಲ್ಲಿರುವ ಕಾರಣ ಪೆಟ್ರೋಲ್ ಬಂಕ್‍ನಲ್ಲಿ ನೌಕರರು ಆರಾಮವಾಗಿ ಕುಳಿತ ಹರಟುತ್ತಿರುವ ದೃಶ್ಯ ಕಂಡುಬಂತು.