ವಾರಾಂತ್ಯದ ಲಾಕ್‍ಡೌನ್ ಜನ, ವಾಹನ ಸಂಚಾರ ನಿರ್ಭಂಧ ಬಣಗುಡುತ್ತಿರುವ ಬಜಾರ್‍ಗಳು

ಬಳ್ಳಾರಿ ಏ 24 : ಹೆಚ್ಚುತ್ತಿರುವ ಕರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಾರಾಂತ್ಯದ ಶನಿವಾರ ಮತ್ತು ಭಾನುವಾರದ ಲಾಕ್‍ಡೌನ್‍ನಿಂದಾಗಿ ನಗರದಲ್ಲಿ ಬೆಳಿಗ್ಗೆ 10 ರಿಂದ ವಾಹನ ಮತ್ತು ಜನರ ಸಂಚಾರ ವಿರಳವಾಗಿತ್ತು. ಔಷಧಿ ಮಳೆಗೆಗಳು ಬಿಟ್ಟು ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಜಾರ್‍ಗಳು ಬಿಕೋ ಎನ್ನುತ್ತಿದ್ದವು.
ನಿನ್ನೆ ರಾತ್ರಿ 9 ರಿಂದಲೇ ವಾರಾಂತ್ಯದ ಲಾಕ್‍ಡೌನ್ ಆರಂಭಗೊಂಡು ನಾಡಿದ್ದು ಸೋಮವಾರ ಬೆಳಿಗ್ಗೆ 6 ಗಂಟೆ ವರೆಗೆ ಇದ್ದರೂ, ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯವಾದ ಹಾಲು, ಹಣ್ಣು, ದಿನಸಿ ಖರೀದಿಗೆ ಅವಕಾಶ ನೀಡಿದ್ದರಿಂದ ಜನತೆ ಮಾರುಕಟ್ಟೆಗಳಿಗೆ, ಅಂಗಡಿಗಳಿಗೆ ಓಡಾಟ ಮಾಡಿದ್ದರು. ನಿಯಮದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂದಿದ್ದರೂ, ನಗರದ ಜನತೆ ತರಕಾರಿ ಖರೀದಿಗೆ ಎಪಿಎಂಸಿ ಮಾಡುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಇದರಿಂದ ಅಲ್ಲಿ ಕರೋನಾ ನಿಯಮಗಳೆಲ್ಲ ಮಂಗಮಾಯಾ ಆಗಿದ್ದವು.
ಅದನ್ನು ನಿಯಂತ್ರಿಸಲು ಪೊಲೀಸರು. ತರಕಾರಿ ಮಾರಾಟಗಾರರನ್ನು ನಗರದ ಏಳು ಕಡೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವ ಮೈದಾನಗಳಿಗೆ ತೆರಳುವಂತೆ ಹೇಳುತ್ತಿದ್ದರು. ಆದರೆ ವ್ಯಾಪಾರಿಗಳು ಇದಕ್ಕೆ ಅಲ್ಲಿ ವ್ಯವಸ್ಥೆ, ಆಗಿಲ್ಲ, ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ, ಇಂದು ಬಂದಿರುವ ಮಾಲನ್ನು ಮಾರಾಟ ಮಾಡಲು ಬಿಡಿ ಎಂದು ವಾಗ್ವಾದ ನಡೆಸಿದ್ದು ಕಂಡು ಬಂತು.
ನಗರದ ಪ್ರಮುಖ ಸರ್ಕಲ್‍ಗಳಲ್ಲಿ, ರಸ್ತೆಗಳಲ್ಲಿ ಪೊಲೀಸರು ನಿಂತು ಅನಾವಶ್ಯಕವಾಗಿ ಓಡಾಡುವವರನ್ನು ತಡೆದು ಕೇಸು ಜಡಿಯುವ ಕೆಲಸ ಮಾಡುತ್ತಿದ್ದರು, ಮದುವೆ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರು, ಆಸ್ಪತ್ರೆ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಹೋಗುವವರನ್ನು ಪಾಸು ಇಲ್ಲವೆ ದಾಖಲೆಗಳನ್ನು ಪರಿಶೀಲನೆ ಮಾಡಿ ಬಿಡುತ್ತಿದ್ದರು. ಒಟ್ಟಾರೆ ವಾಹನ, ಜನ ಸಂಚಾರ ಇಲ್ಲದೆ ಕರೋನಾ ವಿಸ್ತರಣೆಗೆ ಬ್ರೇಕ್ ಹಾಕಲು ಮಾಡಿರುವ ಈ ಪ್ರಯತ್ನ ಉತ್ತಮವಾಗಿದೆಂದು ಹೇಳಬಹುದು.
ಲಾಕ್‍ಡೌನ್ ಇದ್ದರೂ, ನಡೆಯುತ್ತಿರುವ ಪಾಲಿಕೆ ಚುನಾವಣೆಯಿಂದಾಗಿ ಅನೇಕ ಮುಖಂಡರು ಕಾರುಗಳಲ್ಲಿ ಓಡಾಡುತ್ತಿದ್ದರು. ಇದನ್ನು ನೋಡಿ ಪೊಲೀಸರು ಮಾತ್ರ ಮೌನವಾಗಿರಬೇಕಾಗಿತ್ತು. ಅವರು ಅನೇಕ ಕಡೆ ಸಂಚರಿಸಿ ಚುನಾವಣೆ ಹೊಂದಾಣಿಕೆ, ತಂತ್ರಗಾರಿಕೆ ಮೊದಲಾದವುಗಳ ಕುರಿತು ಚರ್ಚಿಸುವ ಕಾರ್ಯ ನಡೆಸಿದ್ದು ಕಂಡು ಬಂತು. ಇನ್ನು ಕೆಲ ಅಭ್ಯರ್ಥಿಗಳು ಬೆಳಿಗ್ಗೆಯೇ ಎದ್ದು 10 ಗಂ‌ಟೆಯ ವರೆಗೆ ತಮ್ಮ ವಾರ್ಡಿನ ಒಂದಿಷ್ಟು ಮನೆಗಳಿಗೆ ತೆರಳಿ ಮತಯಾಚನೆಯನ್ನು ಸಹ ಮಾಡಿದ್ದಾರೆ.