ವಾರಾಂತ್ಯದ ಕರ್ಪ್ಯೂಗೆ ಜನತೆ ಉತ್ತಮ ಸಹಕಾರ:ಬೊಮ್ಮಾಯಿ

ಬೆಂಗಳೂರು,ಏ.24-ಕೊರೊನಾ ತಡೆಗಟ್ಟಲು ಜಾರಿಗೊಳಿಸಿದ ವಾರಾಂತ್ಯದ ಕರ್ಪ್ಯೂ ಗೆ ಜನತೆ ಉತ್ತಮ ಸಹಕಾರ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಕರ್ಪ್ಯೂ ಜಾರಿ ಪರಿಶೀಲನೆ ನಡೆಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಬೆಳಗ್ಗೆ 10 ಗಂಟೆವರೆಗೂ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಮಯಾವಕಾಶ ನೀಡಿ ನಂತರ ಎಲ್ಲಾ ಮುಚ್ಚಿಸಲಾಗಿದ್ದು ಜನರು ಉತ್ತಮ ಸಹಕಾರ ಕೊಟ್ಟಿದ್ದಾರೆ, ನಮ್ಮ ಸಿಬ್ಬಂದಿ ಬೆಳಗ್ಗೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಕೆ.ಆರ್.ಮಾರುಕಟ್ಟೆ ಜಂಕ್ಷನ್ ಅತಿ ಮುಖ್ಯ, ಅತಿ ಹೆಚ್ಚು ಜನ ಸೇರುವ ಜಾಗ, ತುಂಬಾ ವ್ಯಾಪಾರ ಆಗುವ ಜಾಗ. ಪಕ್ಕದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕೂಡ ಇದೆ. ನಮ್ಮ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರು ಸಹಕಾರ ನೀಡಿದ್ದಾರೆ.8ಸಾವಿರ ಮಂದಿ ಜನ ಪೊಲೀಸ್ ಸಿಬ್ಬಂದಿ ಅಧಿಕಾರಿಗಳು ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬೇರೆ ಭಾಗದಲ್ಲಿ ಕೂಡ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿಗೆ ಕೆಲವು ಕಡೆ ಪಾಸಿಟಿವ್ ಕೇಸ್ ಬಂದಿದೆ. ಬೆಂಗಳೂರಿನಲ್ಲಿ ಪೋಲಿಸ್ ಅಧಿಕಾರಿ, ಸಿಬ್ಬಂದಿಗೆ ಮೂರು ಕೋವಿಡ್ ಕೇರ್ ಸೆಂಟರ್ ಮಾಡಿದ್ದೇವೆ. ನಮ್ಮ ಅಧಿಕಾರಿಗಳ ಜೊತೆಗೆ ಅವರ ಕುಟುಂಬ ಕೂಡ ಮುಖ್ಯ. ಅವರ ಆರೋಗ್ಯ ಕೂಡ ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಇಲ್ಲಿ ವ್ಯಾಪಾರಸ್ಥರು ಸೇರಿ ಎಲ್ಲಾ ರೀತಿಯ ವ್ಯವಹಾರದ ಜನ ಬರಲಿದ್ದು ನಮ್ಮ ಪೊಲೀಸರು ಬೆಳಗ್ಗೆಯಿಂದ ಇಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಾರಾಂತ್ಯದ ಕರ್ಪ್ಯೂ ಯಶಸ್ವಿಯಾಗಿದೆ ಎಂದರು.
ಬೆಳಗ್ಗೆ ಆರು ಗಂಟೆಯಿಂದಲೇ ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೆಆರ್ ಮಾರುಕಟ್ಟೆ ಪಕ್ಕ ವಿಕ್ಟೋರಿಯಾ ಆಸ್ಪತ್ರೆಯಿದೆ. ಕೋವಿಡ್​ಗಾಗಿ ಇರುವ ಅತಿ ದೊಡ್ಡ ಆಸ್ಪತ್ರೆಯಾಗಿದೆ. ಹೀಗಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದೇನೆ ಎಂದರು.
ಸಿಟಿ ಮಾರುಕಟ್ಟೆ, ಫ್ಲವರ್ ಮಾರ್ಕೆಟ್, ತರಕಾರಿ ಮಾರ್ಕೆಟ್ ಪರೀಶಿಲನೆ ನಡೆಸಿದರು. ಗೃಹ ಸಚಿವ ಬೊಮ್ಮಾಯಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಾಥ್​ ನೀಡಿದರು.