ವಾರಾಂತ್ಯದ ಕಫ್ರ್ಯೂ: ಕಲಬುರಗಿ ಸಂಪೂರ್ಣ ಸ್ತಬ್ದ, ಅನಗತ್ಯ ಸವಾರರ ಮೇಲೆ ಲಾಠಿ ಪ್ರಹಾರ

ಕಲಬುರಗಿ,ಏ. 24:ಕೋವಿಡ್ ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ವಾರಾಂತ್ಯದ ಕಫ್ರ್ಯೂ ಜಾರಿಯಿಂದಾಗಿ ಶನಿವಾರ ನಗರ ಹಾಗೂ ಜಿಲ್ಲೆಯು ಸ್ತಬ್ದಗೊಂಡಿತು. ಆದಾಗ್ಯೂ, ಅನಗತ್ಯವಾಗಿ ಸಂಚರಿಸಿದ ವಾಹನಗಳ ಸವಾರರ ಮೇಲೆ ಪೋಲಿಸರು ಲಾಠಿ ಬೀಸಿದರು. ಕೆಲವೆಡೆ ವಾಹನಗಳನ್ನು ಪೋಲಿಸರು ಜಪ್ತಿ ಮಾಡಿಕೊಂಡರು.
ಔಷಧ ಅಂಗಡಿ, ಆಸ್ಪತ್ರೆಗಳು, ಪೆಟ್ರೋಲ್ ಪಂಪ್‍ಗಳು, ಬ್ಯಾಂಕ್ ಹಾಗೂ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ, ಉಳಿದಂತೆ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಹೀಗಾಗಿ ಸದಾ ಜನನಿಬಿಡದ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
ನಗರದ ಎಂ.ಎಸ್.ಕೆ. ಮಿಲ್ ಪ್ರದೇಶ, ಬಸ್ ನಿಲ್ದಾಣದಲ್ಲಿನ ಪ್ರದೇಶ, ರಾಷ್ಟ್ರಪತಿ ಚೌಕ್, ಶರಣಬಸವೇಶ್ವರ್ ಕಾಲೇಜು ರಸ್ತೆ, ಆನಂದ್ ಹೊಟೇಲ್, ಗೋವಾ ಹೊಟೇಲ್, ಲಾಲ್‍ಗಿರಿ ಕ್ರಾಸ್, ಸೂಪರ್ ಮಾರ್ಕೆಟ್, ಬಾಂಡೇ ಬಜಾರ್, ಚಪ್ಪಲ್ ಬಜಾರ್, ಸರಾಫ್ ಬಜಾರ್, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಕಾಲೇಜು ರಸ್ತೆ, ಐವಾನ್ ಶಾಹಿ ಅತಿಥಿಗೃಹದ ಪ್ರದೇಶ, ಏಶಿಯನ್ ಮಾಲ್ ಪ್ರದೇಶ, ಎಸ್‍ಟಿಬಿಟಿ ಕ್ರಾಸ್, ಸಂತ್ರಸವಾಡಿ, ಮುಸ್ಲಿಂ ಚೌಕ್, ದರ್ಗಾ ಪ್ರದೇಶ, ಹುಮ್ನಾಬಾದ್ ಬೇಸ್, ಗಂಜ್ ಪ್ರದೇಶ, ಖರ್ಗೆ ಪೆಟ್ರೋಲ್ ಪಂಪ್ ಪ್ರದೇಶ, ರಾಮ ಮಂದಿರ ರಸ್ತೆ, ಕೆಸರಟಗಿ ಕ್ರಾಸ್, ರಾಜಾಪೂರ್ ರಸ್ತೆ, ಆರ್‍ಟಿಓ ಕ್ರಾಸ್, ಅಫಜಲಪೂರ್ ರಸ್ತೆ, ಜೇವರ್ಗಿ ರಸ್ತೆ, ರಾಮಮಂದಿರ, ಹೈಕೋರ್ಟ್ ಪ್ರದೇಶ ಸೇರಿದಂತೆ ಬಹುತೇಕ ನಗರದ 55 ವಾರ್ಡ್‍ಗಳಲ್ಲಿನ ಪ್ರಮುಖ ರಸ್ತೆಗಳ ಅಕ್ಕ, ಪಕ್ಕದಲ್ಲಿನ ಬಹುತೇಕ ಅಂಗಡಿ ಹಾಗೂ ಮುಂಗಟ್ಟುಗಳು ಮುಚ್ಚಿದ್ದವು.
ಯಾವುದೇ ಸಂದರ್ಭದಲ್ಲಿಯೂ ಸಹ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಕಣ್ಣಿ ಮಾರುಕಟ್ಟೆ, ಸೂಪರ್ ಮಾರ್ಕೆಟ್, ಯಂಕವ್ವ ಮಾರ್ಕೆಟ್ ಸೇರಿದಂತೆ ಎಲ್ಲ ಕಾಯಿಪಲ್ಯೆ ಮಾರುಕಟ್ಟೆಗಳೂ ಸಹ ಬಂದ್ ಆಗಿ, ಜನಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ಬಡಾವಣೆಯ ಒಳ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಗಳು ಕಾರ್ಯನಿರ್ವಹಿಸುವುದಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಲಿಲ್ಲ. ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೋಲಿಸರು ಕರ್ತವ್ಯದ ಮೇಲೆ ಇದ್ದರು.
ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ತಡೆದು ಲಾಠಿ ಬಿಸಿಯನ್ನು ಪೋಲಿಸರು ತಟ್ಟಿಸಿದರು. ಇನ್ನೂ ಹಲವೆಡೆ ಅನಗತ್ಯ ಸವಾರರ ವಾಹನಗಳನ್ನು ಜಪ್ತು ಮಾಡಿಕೊಂಡರು. ಕೆಲವರಿಗೆ ತಿಳುವಳಿಕೆ ನೀಡಿ ಬಿಟ್ಟುಕೊಟ್ಟರು. ಸೂಕ್ತ ದಾಖಲೆಗಳೊಂದಿಗೆ ಸಂಚರಿಸಿದ ವಾಹನ ಸವಾರರಿಗೆ ಯಾವುದೇ ರೀತಿಯಲ್ಲಿ ಪೋಲಿಸರು ತೊಂದರೆ ಮಾಡಲಿಲ್ಲ. ಇಡೀ ನಗರದಲ್ಲಿ ಜನಸಾಮಾನ್ಯರೂ ಸಹ ಮನೆಯಿಂದ ಹೊರಗಡೆ ಬರದೇ ಇದ್ದುದರಿಂದ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದವು. ಹಲವೆಡೆ ಅನಗತ್ಯವಾಗಿ ನಿಂತುಕೊಂಡ ಜನರ ಮೇಲೆ ಪೋಲಿಸರು ಲಾಠಿ ಬೀಸಿ, ಅಲ್ಲಿಂದ ಚದುರಿಸಿದರು.
ಇನ್ನುಳಿದಂತೆ ದುಡಿಯುವ ವರ್ಗದ ಕಾರ್ಮಿಕರು ಹಾಗೂ ಪ್ಲಾಸ್ಟಿಕ್ ಕೊಡಗಳನ್ನು ಮಾರುವವರು, ಕಸಬಾರಿಗೆಗಳನ್ನು ಮಾರಾಟ ಮಾಡುವವರು ಎಂದಿನಂತೆ ತಮ್ಮ ವ್ಯಾಪಾರದಲ್ಲಿ ತೊಡಗಿದರು. ಬಸ್‍ಗಳು, ಆಟೋಗಳು, ಕಾರುಗಳೂ ಸೇರಿದಂತೆ ಎಲ್ಲ ರೀತಿಯ ವಾಹನಗಳ ಸಂಚಾರವೂ ಸಹ ಸ್ಥಗಿತಗೊಂಡಿತ್ತು. ಇದರಿಂದಾಗಿ ರೈತರು ಮತ್ತು ವ್ಯಾಪಾರಸ್ಥರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಪರದಾಡಿದರು.