ನ್ಯೂಯಾರ್ಕ್, ಜೂ.೧೯- ಇತ್ತೀಚಿಗಿನ ದಿನಗಳಲ್ಲಿ ಅಮೆರಿಕಾದಲ್ಲಿ ತೀರಾ ಸಾಮಾನ್ಯವಾಗಿರುವ ಶೂಟೌಟ್ ಪ್ರಕರಣಗಳು ಮುಂದುವರೆದಿದೆ. ನಿನ್ನೆ ವಾರಾಂತ್ಯದಲ್ಲಿ ಹಲವು ಕಡೆಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನಡೆದ ಶೂಟೌಟ್ ಪ್ರಕರಣಗಳಲ್ಲಿ ಕನಿಷ್ಠ ೬ ಮಂದಿ ಮೃತಪಟ್ಟಿದ್ದು, ೧೨ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಒಂದು ಪ್ರಕರಣದಲ್ಲಿ ಭಾನುವಾರ ಮುಂಜಾನೆ ಚಿಕಾಗೋದ ಉಪನಗರದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಟಿಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ೨೨ ಮಂದಿ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಗೆ ನೈಜ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ಸದ್ಯ ಮುಂದುವರೆದಿದೆ. ಅತ್ತ ಮತ್ತೊಂದು ಪ್ರಕರಣದಲ್ಲಿ ವಾಷಿಂಗ್ಟನ್‌ನಲ್ಲಿ ಕೂಡ ಗುಂಡಿನ ದಾಳಿ ನಡೆದಿದೆ. ಶನಿವಾರ ರಾತ್ರಿ ಇಲ್ಲಿನ ಸಂಗೀತ ಉತ್ಸವದಲ್ಲಿ ಭಾಗವಹಿಸಲು ಜನರು ತಂಗಿದ್ದ ವಾಷಿಂಗ್ಟನ್ ಸ್ಟೇಟ್ ಕ್ಯಾಂಪ್‌ಗ್ರೌಂಡ್‌ನಲ್ಲಿ ಶೂಟರ್ ಗುಂಪಿನ ಮೇಲೆ ಬೇಕಾಬಿಟ್ಟಿ ಗುಂಡು ಹಾರಿಸಲು ಪ್ರಾರಂಭಿಸಿದಾಗ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಯಾಂಡ್ ವಂಡರ್‌ಲ್ಯಾಂಡ್ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಫೆಸ್ಟಿವಲ್‌ನಿಂದ ನೂರಾರು ಅಡಿಗಳಷ್ಟು ದೂರದಲ್ಲಿ ಕಾನೂನು ಜಾರಿ ಅಧಿಕಾರಿಗಳೊಂದಿಗೆ ನಡೆದ ಘರ್ಷಣೆಯಲ್ಲಿ ಶಂಕಿತನನ್ನು ಗುಂಡು ಹೊಡೆದು ಹತ್ಯೆ ನಡೆಸಲಾಗಿದೆ. ಇನ್ನು ಮೂರನೇ ಪ್ರಕರಣದಲ್ಲಿ ಶನಿವಾರ ಕೇಂದ್ರ ಪೆನ್ಸಿಲ್ವೇನಿಯಾದಲ್ಲಿ ಯೋಧನನ್ನು ಹತ್ಯೆ ನಡೆಸಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬ ತೀವ್ರವಾಗಿ ಗಾಯಗೊಂದ್ದಾರೆ. ಹೀಗೆ ಸೈಂಟ್ ಲೂಹಿಸ್, ದಕ್ಷಿಣ ಕ್ಯಾಲಿಫೋರ್ನಿಯಾ, ಬಾಲ್ಟಿಮೋರ್ ಮುಂತಾದ ಕಡೆಗಳಲ್ಲೂ ವಾರಾಂತ್ಯದಲ್ಲಿ ಗುಂಡಿನ ದಾಳಿ ನಡೆದಿದೆ.