ವಾರಸುದಾರರಿಲ್ಲದ ರಸ್ತೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು21: ತಾಲೂಕಿನ ಯತ್ನಳ್ಳಿ ಗ್ರಾಮದಿಂದ ಕುಂದಗೋಳ ತಾಲೂಕಿನ ಗುಂಜಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಯ ರಸ್ತೆ ಅನಾಥವಾಗಿದ್ದು ವಾರಸುದಾರರು ಇಲ್ಲದ ರಸ್ತೆಯಾಗಿದೆ.
ಕೇವಲ ಎರಡು ಕಿಲೋಮೀಟರ್ ಇರುವ ಈ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳು ತಮಗೆ ಸೇರಿದ ರಸ್ತೆಯೊಂದು ಇದೆ ಎಂಬ ಪರಿಕಲ್ಪನೆಯು ಇಲ್ಲದಂತೆ ಈ ಕಡೆ ಮುಖ ಮಾಡಿ ನೋಡದೆ ಇರುವುದರಿಂದ ಸಂಪೂರ್ಣ ಹಾಳಾಗಿ ಜಾನುವಾರುಗಳು ಸಹ ಅಡ್ಡಾಡಿದಂತಹ ಸ್ಥಿತಿ ನಿರ್ಮಾಣವಾಗಿದೆ
ಪ್ರತಿ ವರ್ಷ ಮಾರ್ಚ್ ಎಪ್ರಿಲ್ ನಲ್ಲಿ ಗುಂಡಿಗಳನ್ನು ಮುಚ್ಚಲು ಕಿ.ಮೀ ಗೆ ಒಂದು ಲಕ್ಷದಿಂದ 2 ಲಕ್ಷ ರೂಗಳ ವರೆಗೆ ಅನುದಾನ ಬಿಡುಗಡೆಯಾದರೂ ಇಂತಹ ಅನೇಕ ರಸ್ತೆಗಳು ಹಿಡಿ ಮಣ್ಣು ಕಾಣದೆ ಈಗ ಮಳೆಗಾಲದಲ್ಲಿ ರಸ್ತೆಗಳೆಲ್ಲ ಗುಂಡಿಗಳಾಗಿ ಕೆರೆಗಳಂತೆ ಪರಿವರ್ತನೆಯಾಗಿವೆ.
ಈ ಕುರಿತು ಗ್ರಾಮದ ಯುವ ಮುಖಂಡ ಪ್ರಭು ಸೂರಣಗಿ ಅವರು ಪ್ರತಿಕ್ರಿಯೆ ನೀಡಿ ಗುಂಜಳಕ್ಕೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ತಾತ್ಸಾರ ನಿರ್ಲಕ್ಷದಿಂದಾಗಿ ಗುಂಜಲಕ್ಕೆ ಹೋಗಬೇಕಾದರೆ ಮಾದಳ್ಳಿ ಮಾರ್ಗವಾಗಿ ಬಾಗ್ವಾಡ ಮುಖಾಂತರ ಗುಂಜಳಕ್ಕೆ ಹೋಗಬೇಕಾಗಿದೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಈ ರಸ್ತೆಯನ್ನು ದುರಸಿಗೊಳಿಸದಿದ್ದರೆ ಮಾಗಡಿ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ್ದಾರೆ.