ವಾರವಾದರೂ ಬಾರದ ಕೋವಿಡ್ ಟೆಸ್ಟ್ ವರದಿ

ಕಲಬುರಗಿ ಮೇ 3:ಶಂಕಿತ ಕೋವಿಡ್ ಸೋಂಕಿತರ ಆರ್‍ಟಿ ಪಿಸಿಆರ್ ಟೆಸ್ಟ್ ವರದಿ ಬರುವದು ವಿಳಂಬವಾಗುತ್ತಿರುವದು ಆತಂಕಕ್ಕೆ ಕಾರಣವಾಗುತ್ತಿದೆ.
ಕೋವಿಡ್ ರೋಗ ಲಕ್ಷಣಗಳಿರುವವರು,ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದಿರುವವರು ಆರ್‍ಟಿ ಪಿಸಿಆರ್ ಟೆಸ್ಟ್‍ಗಾಗಿ ಗಂಟಲು ದ್ರವದ ಮಾದರಿ ನೀಡಿ.ವರದಿಗಾಗಿ ಸುದೀರ್ಘ ಕಾಲ ಕಾಯಬೇಕಾಗಿ ಬಂದಿದೆ.
ಕಳೆದ ಎಂಟು ದಿನಗಳ ಹಿಂದೆ( ಏಪ್ರಿಲ್ 26 ರಂದು) ಆರ್‍ಟಿ ಪಿಸಿಆರ್ ಟೆಸ್ಟ್‍ಗಾಗಿ ಗಂಟಲು ದ್ರವದ ಮಾದರಿ ನೀಡಿದ ಕಲಬುರಗಿ ನಗರದ ವ್ಯಕ್ತಿಯೊಬ್ಬರು, ಇನ್ನೂ ಲ್ಯಾಬ್ ವರದಿ ಬಂದಿಲ್ಲ ಎಂದು ಸಂಜೆವಾಣಿಯೊಂದಿಗೆ ಮಾತನಾಡಿ ತಿಳಿಸಿದರು.
ಕೋರೋನಾ ಪಾಸಿಟಿವ್ ಬಂದು,ಯಾವುದೇ ರೋಗಲಕ್ಷಣಗಳಿಲ್ಲದವರು ವೈದ್ಯರ ಸೂಚನೆಯಂತೆ ಮನೆಯಲ್ಲಿಯೇ ಐಸೋಲೇಷನ್ ಆಗಿ ನಿಗದಿತ ಅವಧಿ ಮುಗಿದ ನಂತರ ,ಮತ್ತೆ ಕೊರೋನಾ ಟೆಸ್ಟ್ ಮಾಡಿಸಬೇಕಾಗುತ್ತದೆ.ಆದರೆ ಈ ವರದಿ ಬರುವದು ತುಂಬಾ ತಡವಾಗಿ, ನೆಗೆಟಿವ್ ಖಚಿತವಾಗದೇ ಅವರು ತಮ್ಮ ನಿತ್ಯದ ವೃತ್ತಿಗೆ ಮರುಳುವದಾದರೂ ಹೇಗೆ ? ಎಂಬ ಪ್ರಶ್ನೆ ಎದುರಾಗುತ್ತದೆ. ಕೇವಲ ಪಾಸಿಟಿವ್ ಇದ್ದವರನ್ನು ಮಾತ್ರ ಸಂಬಂದಪಟ್ಟ ಆಸ್ಪತ್ರೆ ಅಥವಾ ಲ್ಯಾಬ್ ನವರು ಸಂಪರ್ಕಿಸುತ್ತಾರೆ. ಆದರೆ ನೆಗೆಟಿವ್ ಬಂದರೆ ಉತ್ತರಿಸಲು ಹೋಗುವದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಆದರೆ ನೆಗೆಟಿವ್ ವರದಿ ಬಂದವರಿಗೂ ಫೋನ್ ಅಥವಾ ಮೆಸೇಜ್ ಮೂಲಕ ತಿಳಿಸುವದು ಸೂಕ್ತ ಎಂದು ಬಹುತೇಕ ನಾಗರಿಕರ ಅಭಿಪ್ರಾಯ.