ವಾರದ ಸಂತೆಯಲ್ಲಿ ಬಿಡಾಡಿ ದನಗಳ ಹಾವಳಿ; ಸೂಕ್ತ ವ್ಯವಸ್ಥೆಗೆ ಮನವಿ

ಸಂಜೆವಾಣಿ ವಾರ್ತೆ

ಜಗಳೂರು.ಸೆ.೫; ವಾರದ ಸಂತೆಯಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರು ಜೀವವನ್ನು ಅಂಗೈಯಲ್ಲಿಡಿದು ತರಕಾರಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದ್ದು ಓರ್ವ ಮಹಿಳೆಯನ್ನು ತಿವಿದು ನೆಲಕ್ಕೆ ಕೆಡವಿ ಮೈಮೇಲೆ ಕಾಲಿಟ್ಟು ಗಾಯಗೊಳಿಸಿದ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವಂತಾಗಿದ್ದು ಪಪಂನವರು ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಕಳಿಸದೇ ತೀರ್ವ ನಿರ್ಲಕ್ಷ್ಯ ವಹಿಸಿದ್ದಾರೆಂದು ಅಲ್ಲಿನ ವ್ಯಾಪಾರಿಗಳು ಹಿಡಿ ಶಾಪ ಹಾಕಿದರು.ಪಟ್ಟಣದ ಆಯಿಲ್‌ಮಿಲ್ ಮುಂಭಾಗದಲ್ಲಿ ಪ್ರತಿ ಶನಿವಾರ ಸಂತೆ ನಡೆಯಲಿದ್ದು ನಗರ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ವ್ಯಾಪಾರಸ್ಥರು ಮತ್ತು ತರಕಾರಿ ಖರೀದಿಸಲು ಹೆಚ್ಚಾಗಿ ಮಹಿಳೆಯರೇ ಬರುತ್ತಿದ್ದು ಸಂತೆಯಲ್ಲಿ ಹತ್ತಾರು ಎಮ್ಮೆ ಸೇರಿದಂತೆ ಬಿಡಾಡಿ ದನಗಳು ಎಲ್ಲೆಂದರಲ್ಲಿ ಒಂದಕ್ಕೊಂದು ತಿವಿದಾಡುತ್ತಾ ಜನರ ಮೈಮೇಲೆ ಬಂದು ಬೀಳಿಸಿ ತುಂಬಾ ತೊಂದರೆಯನ್ನು ಕೊಡುತ್ತಿವೆ ಸೆ.ರಂದು ಶನಿವಾರ ಪಟ್ಟಣದ ಶಾಂತಮ್ಮ ಎಂಬ ಮಹಿಳೆ ಬಗ್ಗಿಕೊಂಡು ತರಕಾರಿ ಖರೀದಿಸುವಾಗ ಹಿಂಬದಿಯಿAದ ಓಡೋಡಿ ಬಂದ ನಾಲ್ಕು ಎಮ್ಮೆಗಳು ಆ ಮಹಿಳೆಯನ್ನು ನೆಲಕ್ಕೆ ಕೆಡವಿ ಮೈಮೇಲೆ ಕಾಲಿಟ್ಟ ಹಿನ್ನಲೆಯಲ್ಲಿ ತೀವ್ರ ಗಾಯಗೊಂಡ ಮಹಿಳೆಯನ್ನು ಅಲ್ಲಿದ್ದ ಕೆಲವು ವ್ಯಾಪಾರಿಗಳು ಎಮ್ಮೆಯಿಂದ ಕಾಪಾಡಿ ನೀರು ಕುಡಿಸಿ ನಂತರ ಆಸ್ಪತ್ರೆಗೆ ಕಳುಹಿಸಿಕೊಟ್ಟ ಪ್ರಸಂಗ ಜರುಗಿತು.ಬಿಡಾಡಿ ದನಗಳಿಗಿಲ್ಲ ಬ್ರೇಕ್: ಪಟ್ಟಣದಾದ್ಯಂತ ಬಿಡಾಡಿ ದನಗಳು ಸೇರಿದಂತೆ ನಾಯಿ ಮತ್ತು ಹಂದಿಗಳು ಗುಂಪು ಗುಂಪಾಗಿ ತಿರುಗಾಡುತ್ತಾ ವಾಹನಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೂ ದನಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ನಿಯಂತ್ರಣದಲ್ಲಿಡದೇ ಪಪಂನವರು ವಿಫಲರಾಗಿದ್ದಾರೆ ರಸ್ತೆಯಲ್ಲಿ ವೃದ್ಧರು ಮಹಿಳೆ ಮತ್ತು ಮಕ್ಕಳು ಭಯದ ವಾತಾವರಣದಲ್ಲಿ ಸಂಚರಿಸುತ್ತಿದ್ದರೂ ಸಹ ಬಿಡಾಡಿ ದನಗಳನ್ನು ಗೋಶಾಲೆಗೆ ಕಳಿಸದೇ ತಮಗೇನು ಸಂಬAಧವಿಲ್ಲ ಎನ್ನುವಂತೆ ಪಪಂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆಂಬುದು ನಾಗರೀಕರ ಆರೋಪವಾಗಿದೆ. ಮೂಲಭೂತ ಸೌಲಭ್ಯಗಳಿಲ್ಲ: ಸಂತೆಯಲ್ಲಿ ವ್ಯಾಪಾರಿಗಳಿಗೆ ಕುಳಿತುಕೊಳ್ಳಲು ಕಟ್ಟೆಯನ್ನು ನಿರ್ಮಿಸಿಕೊಟ್ಟಿಲ್ಲ ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ಮಾಡುವಂತಾಗಿದ್ದು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಮತ್ತು ಸಂತೆಗೆ ಬರುವ ವ್ಯಾಪಾರಿಗಳು ಮತ್ತು ಖರೀದಿದಾರರಿಗೆ ಶೌಚಾಲಯ ಇಲ್ಲದೇ ಪಕ್ಕದಲ್ಲಿಯೇ ಬೆಳೆದು ನಿಂತ ಜಾಲಿ ಗಿಡಗಳ ಪೊದೆಯನ್ನು ಆಶ್ರಯಿಸುವಂತಾಗಿದೆ. ವರ್ಷಕ್ಕೊಮ್ಮೆ ಸಂತೆ ಹರಾಜು ಮಾಡಿ ಹಣ ಪಡೆದುಕೊಳ್ಳುವ ಪಪಂನವರು ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ ವ್ಯಾಪಾರಿಗಳು ಮತ್ತು ಖರೀದಿದಾರರ ಅನುಕೂಲಕ್ಕೆ ತಕ್ಕಂತೆ ನೂತನ ಸಂತೆ ಮಾರುಕಟ್ಟೆಯನ್ನು ನಿರ್ಮಿಸಿದರೆ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂಬುದು ತಾಲೂಕಿನ ಜನರ ಒತ್ತಾಸೆಯಾಗಿದೆ.