ವಾರದ ನಂತರ ಸಾವು ಇಳಿಕೆ

ಬೆಂಗಳೂರು,ಜೂ.೪- ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ ಇನ್ನೊಂದು ವಾರದ ನಂತರ ಇಳಿಮುಖವಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸೋಂಕು ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದೆ. ನಿನ್ನೆ ಮೊನ್ನೆ ಪ್ರಕರಣಗಳಲ್ಲಿ ಅಂತಹ ಗಣನೀಯ ಏರಿಕೆಯಾಗಿಲ್ಲ. ಪ್ರಕರಣಗಳಿಗಿಂತ ಪಾಸಿಟಿವಿಟಿ ದರ ಕಡಿಮೆ ಮಾಡುವತ್ತ ಗಮನ ಹರಿಸಿದ್ದೇವೆ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಸೋಂಕು ಪ್ರಕರಣಗಳು ಇಳಿಕೆಯಾಗಿದ್ದರೂ ಸಾವಿನ ಸಂಖ್ಯೆ ಹೆಚ್ಚಿದೆ. ಪ್ರತಿದಿನ ಸಾವುಗಳ ಸಂಖ್ಯೆ ೪೫೦ ದಾಟುತ್ತಿದೆ. ಐಸಿಯು, ವೆಂಟಿಲೇಟರ್‌ನಲ್ಲಿರುವ ಸೋಂಕಿತರು ಸಾವಿಗೀಡಾಗುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣ. ಒಂದು ವಾರದ ನಂತರ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗುವ ನಿರೀಕ್ಷೆ ಇದೆ ಎಂದರು.
ಪಾಸಿಟಿವಿಟಿ ದರವನ್ನು ಶೇ. ೫ಕ್ಕೆ ಇಳಿಸುವ ಗುರಿ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲೂ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿವೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ೧ ಕೋಟಿಗೂ ಹೆಚ್ಚು ಜನರಿದ್ದಾರೆ. ಇವರಲ್ಲಿ ಶೇ. ೨೮ ರಷ್ಟು ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಉಳಿದವರಿಗೂ ಆದಷ್ಟು ಶೀಘ್ರ ಲಸಿಕೆ ನೀಡಲಾಗುವುದು ಎಂದರು.
ಕೋವಿಡ್‌ನಿಂದ ಮಕ್ಕಳಲ್ಲಿ ಹೇಳಿಕೊಳ್ಳುವಂತಹ ಪ್ರಭಾವ ಆಗುವುದಿಲ್ಲ. ಜ್ವರದಂತಹ ಲಕ್ಷಣಗಳು ಗೋಚರಿಸಿ ಬಹುಬೇಗ ಗುಣಮುಖರಾಗುತ್ತಾರೆ. ಪೋಷಕರು ಹೆದರಿಕೊಳ್ಳುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚೆರಿಕೆ ಇರಲಿ ಎಂದರು.