ವಾರದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ- ಸಿಎಂ

ಬೆಂಗಳೂರು,ಮಾ.೩೧:ಇನ್ನೊಂದು ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇತಿಹಾಸ ಪ್ರಸಿದ್ಧ ಘಾಟಿಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಮತ್ತು ನಾಡಿದ್ದು, ಮಂಡಲ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಮುಖಂಡರ ಜತೆ ಸಭೆ ನಡೆಸಿದ್ದೇವೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸುತ್ತೇವೆ. ಅಲ್ಲಿ ಪಟ್ಟಿಗೆ ಒಪ್ಪಿಗೆ ನೀಡಿದ ನಂತರ ಅದನ್ನು ಪ್ರಕಟಿಸುವ ಕೆಲಸ ಆಗುತ್ತದೆ. ಇನ್ನು ೭-೮ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳ್ಳುತ್ತದೆ ಎಂದರು.ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ. ಇವರು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಏನೂ ಮಾಡಲಿಲ್ಲ. ಅಸಾಧ್ಯವಾದುದನ್ನು ನಾವು ಮಾಡಿದ್ದೇವೆ. ಇದರಿಂದ ಕಾಂಗ್ರೆಸ್‌ನವರಿಗೆ ತಳಮಳ ಆಗಿದೆ ಎಂದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಅವರು ೨೦೧೩ರಲ್ಲಿ ನನ್ನ ಕೊನೇ ಚುನಾವಣೆ ಎಂದರು. ೨೦೧೮ರಲ್ಲೂ ಮತ್ತೆ ಇದೇ ನನ್ನ ಕೊನೇ ಚುನಾವಣೆ ಎಂದರು. ಈಗಲೂ ಅದೇ ಮಾತು ಹೇಳುತ್ತಿದ್ದಾರೆ. ೨೦೧೮ರಲ್ಲಿ ಜನ ಸಿದ್ದರಾಮಯ್ಯರವರನ್ನು ತಿರಸ್ಕರಿಸಿದ್ದಾರೆ. ೨೦೨೩ರಲ್ಲೂ ಅವರನ್ನು ಜನ ತಿರಸ್ಕರಿಸುವರು ಎಂದರು.ಕೆಲವು ಚುನಾವಣಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪರ ಒಲವು ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲ ಹಳೆಯ ಸಮೀಕ್ಷೆಗಳು, ಕೆಲವು ಸಮೀಕ್ಷೆಗಳಲ್ಲಿ ಪೈಪೋಟಿ ಇದೆ ಎಂದು ಬಂದಿದೆ. ಚುನಾವಣೆ ಇನ್ನು ಒಂದೂವರೆ ತಿಂಗಳಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.