ವಾರದಲ್ಲಿ ಒಂದು ದಿನ ನದಿ ನೀರನ್ನು ಬಳಸದೆ ಉಳಿಸುವ ಪ್ರಯತ್ನ ಮಾಡಿ ರೈತರಿಗೆ ಶಾಸಕ ಲಕ್ಷ್ಮಣ ಸವದಿ ಮನವಿ

ಅಥಣಿ :ಅ.17: ಮುಂಗಾರು ಮಳೆಯ ಅಭಾವದಿಂದ ಕೃಷ್ಣಾ ನದಿಯಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ. ಮುಂದಿನ ದಿನಮಾನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎನ್ನುವ ಉದ್ದೇಶದಿಂದ. ರೈತರು ವಾರದಲ್ಲಿ ಒಂದು ದಿನ ಸೋಮವಾರ ಹೇಗೆ ಎತ್ತುಗಳನ್ನು ಹೊಡುವುದಿಲ್ಲವೋ ಆ ಸಂಪ್ರದಾಯದಂತೆ ವಾರದಲ್ಲಿ ಒಂದು ದಿನ ನದಿ ನೀರನ್ನು ಬಳಸದೆ ಉಳಿಸುವ ಪ್ರಯತ್ನ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ರೈತರಲ್ಲಿ ಮನವಿ ಮಾಡಿದರು.
ಅವರು ತಾಲೂಕಿನ ನಾಗನೂರ ಪಿಕೆ ಗ್ರಾಮದಲ್ಲಿ ಗ್ರಾಮದೇವತೆ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಹಾಗೂ ದಸರಾ ಹಬ್ಬದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಬರಗಾಲದ ಈ ಸಂದರ್ಭದಲ್ಲಿ ರೈತರೂ ಕೂಡಾ ಅನಾವಶ್ಯಕವಾಗಿ ನದಿ ನೀರು ಪೆÇೀಲಾಗದಂತೆ ಕಾಳಜಿ ವಹಿಸುವುದು ಅಗತ್ಯ. ಬೇಸಿಗೆ ಕಾಲದಲ್ಲಿ ನೀರಿನ ಅಭಾವವಾಗದಂತೆ ಈಗಿನಿಂದಲೇ ನೀರನ್ನು ಹಿತಮಿತವಾಗಿ ಬಳಸಿ ಮುಂದೆ ಇದೇ ರೀತಿ ಬರಗಾಲ ಪರಿಸ್ಥಿತಿ ಮುಂದುವರೆದರೆ ಮಾರ್ಚ್ ಏಪ್ರಿಲ್ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಬಹುದು. ನೆರೆಯ ಮಹಾರಾಷ್ಟ್ರದಲ್ಲಿಯೂ ಮಳೆಯ ಕೊರತೆಯಿಂದಾಗಿ. ಅಲ್ಲಿನ ಡ್ಯಾಮ್ ಗಳಲ್ಲಿ ಸುಮಾರು 28 ಟಿಎಂಸಿ ನೀರಿನ ಕೊರತೆ ಇದೆ. ನಮ್ಮ ಹಿಪ್ಪರಗಿ ಡ್ಯಾಮ್ ನಲ್ಲಿ 6 ಟಿಎಂಸಿ ನೀರು ಮಾತ್ರ ಬಳಸಲು ಲಭ್ಯವಿದೆ. ನದಿಗೆ ನೀರಿನ ಒಳಹರಿವು ಕಡಿಮೆಯಾಗುತ್ತಿದೆ. ಮುಂದಿನ ಐದಾರು ದಿನಗಳಲ್ಲಿ ಒಳಹರಿವು ನಿಲ್ಲಬಹುದು. ಈಗಿರುವ ನೀರಿನ್ನು ಬರುವ ಬೇಸಿಗೆಯ ಮೇ ತಿಂಗಳ ಕೊನೆಯವರೆಗೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮ್ಮ ರೈತರು ಮತ್ತು ಸಾರ್ವಜನಿಕರು ಸಹಕರಿಸುವುದು ಅಗತ್ಯವಾಗಿದೆ ಎಂದರು,
ಮುಂದಿನ ಇಪ್ಪತ್ತು ದಿನಗಳ ಒಳಗಾಗಿ ಎರಡು ಜಿಲ್ಲೆಗಳ ಅಧಿಕಾರಿಗಳ ಸಭೆ ಕರೆದು ನದಿ ನೀರನ್ನು ಮಿತವಾಗಿ ಬಳಸುವ ಬಗ್ಗೆ ಚರ್ಚಿಸಲಾಗುವುದು. ತಾವೆಲ್ಲರೂ ಸರ್ಕಾರದೊಂದಿಗೆ ಸಹಕರಿಸಿ ಕೈಜೋಡಿಸಿ ಇಂತಹ ಕಠಿಣವಾದ ದಿನಗಳಲ್ಲಿ ಸರ್ಕಾರ ಯಾವತ್ತೂ ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದರು.
56 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ :-
ನಾಗನೂರ ಪಿಕೆ ಗ್ರಾಮ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಮನೆ ಮನೆಗೆ ನಳದ ಮೂಲಕ ಕುಡಿಯುವ ನೀರು ಜೋಡಿಸುವ ಕಾಮಗಾರಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೊನ್ನೆ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಸಮಾರಂಭ ನೆರವೇರಿಸಿದ್ದಾರೆ. ಸುಮಾರು15 ದಿನಗಳ ಒಳಗಾಗಿ ಭೂಮಿ ಪೂಜೆ ನೆರವೇರಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಬರಲಿದೆ ಯಾವುದೇ ಕಾರಣಕ್ಕೂ ಯಾವ ಹೆಣ್ಣು ಮಗಳು ಕೊಡ ಹೊತ್ತುಕೊಂಡು ಅಲೆದಾಡುವುದು ಆಗಬಾರದು ಮಹಿಳೆಯರು ಈ ನೀರನ್ನು ಹಿತಮಿತವಾಗಿ ಬಳಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ಆರ್ ಜಯಶಂಕರ್, ಕಾಶೀನಾಥ್ ಸವದಿ, ಯುವ ನಾಯಕ ಚಿದಾನಂದ ಸವದಿ, ಶಿವಾನಂದ ಗುಡ್ಡಾಪುರ, ಶ್ರೀಕಾಂತ ಪೂಜಾರಿ, ರಾಮನಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,