ವಾರಕ್ಕೊಮ್ಮೆ ಭೇಟಿ ನೀಡುವುದು ಪಿಕ್‌ನಿಕ್ ಅಲ್ಲದೆ ಮತ್ತೆನು

ದಾವಣಗೆರೆ. ಜೂ.೨; ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದರಂತೆ ಎಂಬುದು ಇತಿಹಾಸ ದಾವಣಗೆರೆ ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನ ಸಾಲು ಸಾಲಾಗಿ ಕೊರೋನ ಎಂಬ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ರವರು ವಾರಕ್ಕೊಮ್ಮೆ ಭೇಟಿ ನೀಡುತ್ತಿರುವುದು ಪಿಕ್‌ನಿಕ್ ಅಲ್ಲದೇ ಮತ್ತೇನು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ಡಿ. ಬಸವರಾಜ್‌ರವರು ಪ್ರಶ್ನಿಸಿದ್ದಾರೆ.ದಾವಣಗೆರೆ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ರವರು ಜಿಲ್ಲೆಯ ಅಭಿವೃದ್ಧಿ, ಆಡಳಿತದ ವಿಚಾರದಲ್ಲಿ ಇದುವರೆಗೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉಸ್ತುವಾರಿ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ 15 ದಿನಗಳ ಕಾಲ ವಾಸ್ತವ್ಯ ಮಾಡಿ ಕೊರೋನ ಮಹಾಮಾರಿ ಉಲ್ಬಣಿಸದಂತೆ ಎಚ್ಚರವಹಿಸಲು ಸೂಚಿಸಿ ಆದೇಶಿಸಿದ್ದರೂ ಸಹ ಮುಖ್ಯಮಂತ್ರಿಗಳ ಮಾತಿಗೆ ಅವರ ಸಂಪುಟದ ಸದಸ್ಯರೇ ಕವಡೆ ಕಾಸಿನ ಕಿಮ್ಮತ್ತುಕೊಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೋವಿಡ್ 2ನೇ ಅಲೆ ಪ್ರಾರಂಭದಿಂದ ಇವತ್ತಿನ ದಿನದವರೆಗೂ ಬಡಜನರು ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಬೆಡ್‌ಗಾಗಿ, ಆಕ್ಸಿಜನ್ ಬೆಡ್‌ಗಾಗಿ ಮತ್ತು ವೆಂಟಿಲೆಟರ್ ಬೆಡ್‌ಗಾಗಿ ಕಣ್ಣೀರಿಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದೆ ನೂರಾರು ಜನರು ಸಾವಿನ ಮನೆ ಸೇರಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಬಡಜನರ ಸಾವಿನ ಲೆಕ್ಕವನ್ನು ಸರಿಯಾಗಿ ನೀಡದೇ ಸುಳ್ಳು ಅಂಕಿ ಅಂಶಗಳನ್ನು ಜಿಲ್ಲಾಡಳಿತ ಪ್ರಕಟಣೆ ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಜನರಿಗೆ ಕೋವಿಡ್ ಲಸಿಕೆ ಕೊರತೆ ಇದ್ದು, ಬೆಳಗಿನ ಜಾವ ಲಸಿಕಾ ಕೇಂದ್ರಗಳಿಗೆ ಹೋದರೂ ಸಹ ಲಸಿಕೆ ದೊರೆಯದೇ ಮನೆಗೆ ವಾಪಾಸ್ ಆಗುತ್ತಿದ್ದಾರೆ. ಇಂತಹ ಸತ್ಯ ಸಂಗತಿಗಳನ್ನು ಅರಿಯಬೇಕಾದರೆ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ವಾಸ್ತöವ್ಯ ಮಾಡಬೇಕು. ಬಡಜನರ ಬಳಿಗೆ ತೆರಳಿ ಅವರ ಸಮಸ್ಯೆಯನ್ನು ಅರಿಯಬೇಕು ಎಂದಿದ್ದಾರೆ.