ವಾರಂತ್ಯಾ ಕಪ್ರ್ಯೂ ನಿಯಮ ಪಾಲಿಸದ ಬೈಕ್ ಸವಾರರಿಗೆ ದಂಡ, ವಾಹನ ಸೀಜ್

ಮರಿಯಮ್ಮನಹಳ್ಳಿ, ಏ.25: ಕೊರೋನಾ ಸೋಂಕಿನ ಹರಡುವಿಕೆಯ 2ನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ವಾರಾಂತ್ಯದ ಲಾಕ್‍ಡೌನ್ ವಿಧಿಸಲಾಗಿದ್ದು, ಮರಿಯಮ್ಮನಹಳ್ಳಿ ಹೋಬಳಿಯಾದ್ಯಂತ ಯಶಸ್ವಿಯಾಗಿದೆ.
ಬೆಳಗ್ಗೆ 10 ಗಂಟೆವರೆಗೆ ಅಗತ್ಯ ಸೇವೆಗಳಾದ ದಿನಸಿ ಅಂಗಡಿಗಳು, ಹಾಲು, ತರಕಾರಿ, ಔಷಧ ಅಂಗಡಿಗಳು ಹಾಗೂ ಇತರೆ ಅವಶ್ಯಕ ಅಂಗಡಿಗಳನ್ನು ಬಿಟ್ಟರೆ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಬೆಳಗ್ಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದನ್ನು ಬಿಟ್ಟರೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ರಸ್ತೆಗಳಲ್ಲಿ ಯಾವುದೇ ವಾಹನಗಳ ಸಂಚಾರ ಇರಲಿಲ್ಲ. ಕೆಲವು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಬಿಟ್ಟರೆ ಜನರಿಗೆ ಬೇರೆ ಯಾವುದೇ ವಾಹನ ಸೌಕರ್ಯ ಲಭ್ಯವಿರಲಿಲ್ಲ.
ಅನಗತ್ಯವಾಗಿ ಸಂಚರಿಸುವ ವಾಹನಗಳಿಗೆ ಪಟ್ಟಣ ಠಾಣೆಯ ಪಿಎಸ್‍ಐ ಎಂ. ಶಿವಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಲಾಠಿ ರುಚಿ ತೋರಿಸಿದರು. ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಲಾಯಿತು. ಅಲ್ಲದೇ ಕಾರಣ ಇಲ್ಲದೇ ಅನಗತ್ಯವಾಗಿ ಸಂಚರಿಸುವ ದ್ವಿಚಕ್ರ ವಾಹನಗಳನ್ನು ದಂಡ ವಿಧಿಸುವುದರ ಜೊತೆಗೆ 25 ದ್ವಿ ಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಉಳಿದಂತೆ ಪಟ್ಟಣದ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ವಾರಾಂತ್ಯದ ಲಾಕ್‍ಡೌನ್ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಪಿಎಸ್‍ಐ ನಾರಾಯಣ, ಎಎಸ್‍ಐಗಳಾದ ನಿರಂಜನಗೌಡ, ದುರುಗಪ್ಪ, ಹನುಮಂತಪ್ಪ, ಸಿಬ್ಬಂದಿಗಳಾದ ಸಿದ್ದು, ಅಂಗಡಿ ಕೊಟ್ರೇಶ್, ಲಿಂಗರಾಜ್, ಪ್ರವೀಣ್, ಸಂಜೀವ್ ಹಾಗೂ ಇತರರು ಇದ್ದರು.