ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಸುಲಿಗೆ

ಕಲಬುರಗಿ,ಸೆ.21-ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಬೆಳಗಿನಜಾವ ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮೂವರು ಸುಲಿಗೆಕೋರರು ಹಲ್ಲೆ ನಡೆಸಿ 6,500 ರೂ.ನಗದು ಮತ್ತು 15 ಸಾವಿರ ರೂ.ಮೌಲ್ಯದ ಮೊಬೈಲ್ ದೋಚಿಕೊಂಡು ಹೋದ ಘಟನೆ ನಡೆದಿದೆ.
ನಗರದ ಮೋಮಿನ್ ಪುರದ ಅಬ್ದುಲ್ ಗಫಾರ್ ತಂದೆ ಮಹ್ಮದ್ ಜಬ್ಬಾರ್ ಮಿಯಾ ಎಂಬುವವರ ಮೇಲೆ ಹಲ್ಲೆ ನಡೆಸಿ ನಗದು ಹಣ ಮತ್ತು ಮೊಬೈಲ್ ದೋಚಿಕೊಂಡು ಹೋಗಲಾಗಿದೆ.
ಅಬ್ದುಲ್ ಗಫಾರ್ ಅವರು ಎಂದಿನಂತೆ ನಿನ್ನೆ ಬೆಳಗಿನಜಾವ 5.30ರ ಸುಮಾರಿಗೆ ಸಾರ್ವಜನಿಕ ಉದ್ಯಾನವನದಲ್ಲಿ ವಾಯು ವಿವಾರ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಮೂವರು ಅಪರಿಚಿತ ಸುಲಿಗೆಕೋರರು ಅವರನ್ನು ತಡೆದು ಅವಾಚ್ಯವಾಗಿ ಬೈಯ್ದು, ಚಾಕುವಿನಿಂದ ಎಡಗೈ ಮತ್ತಿತರ ಕಡೆ ತಿವಿದು ರಕ್ತಗಾಯಗೊಳಿಸಿದ್ದಾರೆ. ನಂತರ ಅವರ ಬಳಿ ಇದ್ದ 6,500 ರೂ.ನಗದು ಮತ್ತು 15 ಸಾವಿರ ರೂಪಾಯಿ ಮೌಲ್ಯದ ರೆಡ್ ಮೀ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಅಬ್ದುಲ್ ಗಫಾರ್ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ಭಯ, ಆತಂಕ
ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಸುಲಿಗೆ ಕೋರರು ಚಾಕುವಿನಿಂದ ಹಲ್ಲೆ ನಡೆಸಿ ನಗದು ಹಣ ಮತ್ತು ಮೊಬೈಲ್ ದೋಚಿಕೊಂಡು ಹೋದ ಘಟನೆ ನಿತ್ಯ ಸಾರ್ವಜನಿಕ ಉದ್ಯಾನವನಕ್ಕೆ ವಾಯುವಿಹಾರಕ್ಕೆ ಆಗಮಿಸುವವರಲ್ಲಿ ಭಯ, ಆತಂಕ ಮೂಡಿಸಿದೆ.
ಹಾಡು ಹಗಲೇ ನಡೆದ ಈ ಘಟನೆಯಿಂದ ವಾಯುವಿಹಾರಿಗಳು ಬೆಚ್ಚಿಬಿದ್ದಿದ್ದಾರೆ. ಇದರಿಂದಾಗಿ ಬೆಳಗಿನಜಾವ ಉದ್ಯಾನವನಕ್ಕೆ ವಾಯು ವಿಹಾರಕ್ಕೆ ಆಗಮಿಸುವುದು ಸಹ ಸುರಕ್ಷಿತವಲ್ಲ ಎಂಬ ಭಾವನೆ ವಾಯು ವಿಹಾರಿಗಳಲ್ಲಿ ಮೂಡುವಂತೆ ಮಾಡಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸುಲಿಗೆಕೋರರ ಹೆಡೆಮುರಿ ಕಟ್ಟುವುದರ ಮೂಲಕ ಮತ್ತು ಜನರಲ್ಲಿ ಸುರಕ್ಷತೆಯ ಭಾವ ಮೂಡಿಸುದರ ಮೂಲಕ ಅವರಲ್ಲಿ ಮನೆ ಮಾಡಿರುವ ಭಯ, ಆತಂಕ ದೂರ ಮಾಡಬೇಕಿದೆ.