ವಾಯು ಮಾಲಿನ್ಯ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸಿ:ಶಿವರಾಜ್ ಬಿ. ಪಾಟೀಲ

ಕಲಬುರಗಿ:ಮಾ.31: ವಿದ್ಯುತ್-ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವುದರ ಮೂಲಕ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಶಿವರಾಜ್ ಬಿ.ಪಾಟೀಲ ಅವರು ಹೇಳಿದರು.
ಕಲಬುರಗಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸಾರಿಗೆ ಇಲಾಖೆ, ವಿ.ಟಿ.ಯು ಪ್ರಾದೇಶಿಕ ಕಚೇರಿ ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ವಿದ್ಯುತ್ ಚಾಲಿತ ವಾಹನಗಳ ಸುಸ್ಥಿರತೆ ಹಾಗೂ ಚಾರ್ಜಿಂಗ್ ಸೌಲಭ್ಯಗಳ ಅಭಿವೃದ್ಧಿ” ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೆಟ್ರೋಲ್, ಡೀಸೆಲ್ ಇಂಧನ ಆಧಾರಿತ ವಾಹನಗಳನ್ನು ಸಾಧ್ಯವಾದಷ್ಟು ಬಳಸುವುದನ್ನು ನಿಲ್ಲಿಸಿದರೆ, ಕಲುಷಿತ ಗಾಳಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ತಡೆಗಟ್ಟಲು ಸಾಧ್ಯವೆಂದರು.
ಭಾರತವು ಕಚ್ಚಾ ತೈಲಕ್ಕಾಗಿ ವಾರ್ಷಿಕವಾಗಿ ಅಂದಾಜು 7 ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ. ಪರ್ಯಾಯ ಇಂಧನ ಬಳಕೆಯಿಂದ ಪರಿಸರವು ಕಾಪಾಡಬಹುದು ಜೊತೆಗೆ ಆರ್ಥಿಕ ಉಳಿತಾಯವು ಮಾಡಬಹುದು. ಹೀಗಾಗಿ ಪೆಟ್ರೋಲ್, ಡಿಸೇಲ್ ಆಧಾರಿತ ವಾಹನಗಳ ಬಳಕೆ ನಿಲ್ಲಿಸಿ, ಚಾರ್ಜಿಂಗ್ ಸೌಲಭ್ಯವುಳ್ಳ ವಾಹನಗಳನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.
ಕಲುಷಿತ ವಾಯು ಮಾಲಿನ್ಯ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ ಸಹ ಆತಂಕ ವ್ಯಕ್ತಪಡಿಸಿ, ಪರಿಸರದ ಮೇಲಾಗುತ್ತಿರುವ ಹೊರೆ ನಿಯಂತ್ರಣಕ್ಕೆ ಸರ್ಕಾರಗಳಿಗೆ ಸೂಚಿಸಿದೆ. ವಾಯು ಮಾಲಿನ್ಯ ವಿಚಾರವಾಗಿ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಒಟ್ಟು ಐದು ಜಿಲ್ಲೆಗಳನ್ನು ಕೆಂಪು ವಲಯಗಳೆಂದು (ರೆಡ್ ಝೋನ್) ಗುರುತಿಸಿರುವ ಬಗ್ಗೆ ಅವರು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂಧನ ರಹಿತ ವಾಹನಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಹೇಳಿದ ಶಿವರಾಜ್ ಬಿ. ಪಾಟೀಲ ಅವರು, ಕಲಬುರಗಿಯಲ್ಲಿ ಇಂತಹ ವಾಹನಗಳ ಬಳಕೆ ವಿರಳವಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ವಾಹನಗಳ ಬಳಸುವ ಮೂಲಕ ಪರಿಸರ ಕಾಳಜಿ ತೋರಿಸಬೇಕಿದೆ ಎಂದರು.
ವಿ.ಟಿ.ಯು. ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ ಗಾದಗೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು. ಅವರಿಗೆ ಪರಿಸರ ಕಾಳಜಿ, ಸಾಮಾಜಿಕ ಜವಾಬ್ದಾರಿ ಕುರಿತು ಅರಿವು ಮೂಡಿಸಬೇಕು. ಇಂತಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗಲು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿ.ಟಿ.ಯು.ನ ಸಹ ಪ್ರಾಧ್ಯಾಪಕ ಎಂ.ಸಿ.ಮಠ್ ಅವರು ಕಾರ್ಯಾಗಾರ ವಿಷಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಸಾರಿಗೆ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ನೂರ ಮಹಮ್ಮದ್ ಭಾಷಾ, ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲg ಎಸ್.ಎಸ್.ಹೆಬ್ಬಾಳ, ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ, ವಿ.ಟಿ.ಯು ಕಾಲೇಜಿನ ಭೋದಕ-ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.