ವಾಯು ಮಾಲಿನ್ಯ ನಾಳೆ ಪರಿಶೀಲನಾ ಸಭೆ

ನವದೆಹಲಿ,ನ.೨೧- ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಅಂಕುಶ ಹಾಕಲು ಜಾರಿಗೊಳಿಸಿರುವ ನಿರ್ಬಂಧಗಳು ಇಂದು ಅಂತ್ಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಚಿವ ಗೋಪಾಲ್‌ರಾಯ್ ಅವರು ನಾಳೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಈ ಮಹತ್ವದ ಸಭೆಯಲ್ಲಿ ಸಂಬಂಧಪಟ್ಟ ಹಿರಿಯ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಾಯುಮಾಲಿನ್ಯ ತಡೆಯುವ ಸಂಬಂಧ ದೆಹಲಿ ಸರ್ಕಾರ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿತ್ತು.
ಅಗತ್ಯವಲ್ಲದ ವಸ್ತುಗಳ ಸಾಗಾಣಿಕೆಗೂ ನಿರ್ಬಂಧ ವಿಧಿಸಿತ್ತು. ಅದರಲ್ಲೂ ದೆಹಲಿ ಪ್ರವೇಶಿಸುವ ಟ್ರಕ್‌ಗಳ ಮೇಲೆ ನಿಷೇಧ ಹೇರಲಾಗಿತ್ತು. ವಾಯುಮಾಲಿನ್ಯ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ನೆಲಸಮಗೊಳಿಸುವ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ. ಸರ್ಕಾರಿ ಮತ್ತು ಖಾಸಗಿ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ದೆಹಲಿ ಸರ್ಕಾರ ಸೂಚನೆ ನೀಡಿತ್ತು.
ಈ ಹಿಂದೆ ಮಾಲಿನ್ಯ ತಡೆಗೆ ಅಗತ್ಯ ಬಿದ್ದರೆ ಲಾಕ್‌ಡೌನ್ ಮಾಡುವುದಾಗಿಯೂ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು.