ವಾಯು ಮಾಲಿನ್ಯ ದೆಹಲಿ ಲಾಕ್‌ಡೌನ್

ನವದೆಹಲಿ, ನ. ೧೫- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಒಂದು ವಾರ ಲಾಕ್‌ಡೌನ್ ಜಾರಿಗೊಳಿಸಲು ದೆಹಲಿ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ನೇತೃತ್ವದ ಆಪ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಬೆನ್ನಲ್ಲೆ ಸುಪ್ರೀಂಕೋರ್ಟ್ ಈ ಸಂಬಂಧ ನಾಳೆ ತುರ್ತು ಸಭೆಯನ್ನು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರವು ವಾಯು ಮಾಲಿನ್ಯ ತಡೆಯಲು ತನ್ನದೇ ಆದ ಕೆಲ ಸೂತ್ರಗಳನ್ನು ನ್ಯಾಯಾಲಯದ ಮುಂದಿಟ್ಟಿದೆ.
ದೆಹಲಿಯಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಒಂದು ವಾರದ ಲಾಕ್‌ಡೌನ್ ಜತೆಗೆ ದೆಹಲಿ ಸುತ್ತಲಿನ ಎನ್‌ಸಿಆರ್ ವ್ಯಾಪ್ತಿಯಲ್ಲಿರುವ ನೆರೆಯ ರಾಜ್ಯಗಳಲ್ಲೂ ಲಾಕ್‌ಡೌನ್ ಜಾರಿಗೊಳಿಸಿದರೆ ಅದು ಅನುಕೂಲಕರ ಎಂದು ಆಪ್ ಸರ್ಕಾರ ಪ್ರಮಾಣ ಪತ್ರದಲ್ಲಿ ಹೇಳಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಗುಣಮಟ್ಟ ಕುಸಿದಿರುವ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದೆಹಲಿ ಸರ್ಕಾರ ಲಾಕ್‌ಡೌನ್‌ಗೆ ಸಿದ್ಧ ಎಂಬ ಪ್ರಮಾಣ ಪತ್ರ ಸಲ್ಲಿಸಿದ ನಂತರ ಸುಪ್ರೀಂಕೋರ್ಟ್ ಈ ಸಂಬಂಧ ನಾಳೆ ತುರ್ತು ಸಭೆಯನ್ನು ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ತುರ್ತು ಹಾಗೂ ಅವಶ್ಯ ಸೇವೆಗಳನ್ನು ಉಳಿಸಿಕೊಂಡು ಯಾವೆಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಬೇಕು ಎಂಬ ಬಗ್ಗೆ ತುರ್ತು ಸಭೆ ಕರೆದು ತೀರ್ಮಾನ ಕೈಗೊಳ್ಳುವಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್‌ನಲ್ಲಿಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಅವರು, ದೆಹಲಿಯ ವಾಯು ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರದ ಮೂರು ಸೂತ್ರಗಳನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು.
ಕೃಷಿ ತ್ಯಾಜ್ಯದಿಂದ ಶೇ. ೧೦ ರಷ್ಟು ಮಾತ್ರ ಮಾಲಿನ್ಯವಾಗುತ್ತಿದೆ. ವಾಹನಗಳು, ಕೈಗಾರಿಕೆಗಳು ಮತ್ತು ವಾಹನ ದಟ್ಟಣೆಯಿಂದ ಕೃಷಿ ತ್ಯಾಜ್ಯದಿಂದ ಆಗುವ ಮಾಲಿನ್ಯಕ್ಕಿಂತ ಹೆಚ್ಚು ಮಾಲಿನ್ಯ ಕೆಲ ಪ್ರದೇಶಗಳಲ್ಲಿ ಆಗುತ್ತಿದೆ ಎಂದು ಅವರು ವಿಚಾರಣೆ ಸಂದರ್ಭದಲ್ಲಿ ಹೇಳಿದರು.
ವಾಯು ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರ ಕೆಲ ಸೂತ್ರಗಳನ್ನು ರೂಪಿಸಿದ್ದು, ಸಮ ಬೆಸ ಸಂಖ್ಯೆಯ ವಾಹನಗಳ ಓಡಾಟ, ಹಾಗೆಯೇ ಟ್ರಕ್‌ಗಳು ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸುವುದು ಇದರಲ್ಲಿ ಸೇರಿದೆ ಎಂದರು.
ಪರಿಸ್ಥಿತಿ ತೀರಾ ಕೆಟ್ಟರೆ ಮಾತ್ರ ಲಾಕ್‌ಡೌನ್ ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಇಚ್ಚೆಯಾಗಿದೆ ಎಂದು ಮೆಹತಾ ನ್ಯಾಯಾಲಯದಲ್ಲಿ ಹೇಳಿದರು.
ದೆಹಲಿಯ ವಾಯುಮಾಲೀನ್ಯ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಎನ್‌ಸಿಆರ್ ವಲಯದಲ್ಲಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಬಗ್ಗೆಯೂ ಪರಿಶೀಲಿಸಿ, ಹಾಗೆಯೇ ಪಂಜಾಬ್, ಉತ್ತರ ಪ್ರದೇಶ, ಹರಿಯಾಣದ ಮುಖ್ಯ ಕಾರ್ಯದರ್ಶಿಗಳು ನಾಳೆ ಕೇಂದ್ರ ಸರ್ಕಾರ ನಡೆಸಲಿರುವ ತುರ್ತು ಸಭೆಯಲ್ಲಿ ಪಾಲ್ಗೊಳ್ಳುವಂತೆಯೂ ಸೂಚನೆ ನೀಡಿತು.
ದೆಹಲಿಯ ವಾಯುಮಾಲಿನ್ಯದ ಬಗ್ಗೆ ನೆಪಗಳನ್ನು ಹೇಳುವುದು ಬೇಡ ಎಂದು ಹೇಳಿದ ಬೆನ್ನಲ್ಲೆ ಆಪ್ ಸರ್ಕಾರ ಸಂಪೂರ್ಣ ಲಾಕ್‌ಡೌನ್‌ಗೆ ನಾವು ಸಿದ್ಧವಿದ್ದೇವೆ. ಈ ಲಾಕ್‌ಡೌನ್ ಇಡೀ ಎನ್‌ಸಿಆರ್ ವಲಯದಲ್ಲಿ ಜಾರಿಯಾದರೆ ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿತು.
ದೆಹಲಿಯ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ನವೆಂಬರ್ ೧೭ ಬುಧವಾರಕ್ಕೆ ನಿಗದಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ದೆಹಲಿಯುವ ವಾಯು ಮಾಲಿನ್ಯ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ದೆಹಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಸುಪ್ರೀಂಕೋರ್ಟ್ ದೆಹಲಿಯಲ್ಲಿ ವಾಯು ಮಾಲೀನ್ಯ ಏರಿಕೆ ಮಟ್ಟವನ್ನು ತುರ್ತು ಪರಿಸ್ಥಿತಿ ಎಂದು ಹೇಳಿ ಒಂದು ವಾರ ಲಾಕ್‌ಡೌನ್ ಘೋಷಿಸಲು ಸಲಹೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಪ್ ಸರ್ಕಾರ ಒಂದು ವಾರದ ಲಾಕ್‌ಡೌನ್‌ಗೆ ಸಿದ್ಧ ಎಂದು ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಇಂದು ಸಲ್ಲಿಸಿತು.
ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರುತ್ತಿದ್ದು, ಇಂದು ಬೆಳಗ್ಗೆ ಸ್ವಲ್ಪ ಮಟ್ಟಿಗೆ ಮಾಲಿನ್ಯದ ಪ್ರಮಾಣ ತಗ್ಗಿತ್ತು. ಆದರೆ, ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶಗಳಲ್ಲಿ ರೈತರು ಕೃಷಿ ತ್ಯಾಜ್ಯ ಸುಡುವುದು, ಮಿತಿ ಮೀರಿದ ವಾಹನಗಳಿಂದ ದೆಹಲಿಯಲ್ಲಿ ವಾತಾವರಣ ತೀರಾ ಕೆಟ್ಟದ್ದಾಗಿದೆ.
ಈ ವಾಯು ಮಾಲಿನ್ಯವನ್ನು ತಗ್ಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಕೊರೊನಾ ಸೋಂಕಿನ ನಂತರ ವಾಯು ಮಾಲಿನ್ಯ ಕಾರಣಕ್ಕಾಗಿ ಲಾಕ್‌ಡೌನ್ ಆಗುತ್ತಿರುವ ದೇಶದ ಮೊದಲ ನಗರ ದೆಹಲಿ ಆಗಲಿದೆ.
ಜಗತ್ತಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಕೊರೊನಾ ತಡೆಗೆ ಪ್ರಪಂಚದ ಹಲವು ದೇಶಗಳು, ಹಲವು ಬಾರಿ, ಹಲವು ದಿನಗಳ ಲಾಕ್‌ಡೌನ್‌ನನ್ನು ಜಾರಿ ಮಾಡಿತ್ತು. ಕೊರೊನಾ ಕಾಣಿಸಿಕೊಂಡ ನಂತವರೇ ಲಾಕ್‌ಡೌನ್ ಏನೆಂಬುದು ಜನರಿಗೆ ಮನದಟ್ಟಾಗಿತ್ತು. ಈಗ ದೆಹಲಿ ವಾಸಿಗಳಿಗೆ ಕೊರೊನಾ ಬದಲು ವಾಯು ಮಾಲಿನ್ಯದ ಕಾರಣಕ್ಕಾಗಿ ಲಾಕ್‌ಡೌನ್‌ಗೆ ಒಳಗಾಬೇಕಾದ ಪರಿಸ್ಥಿತಿ ರೂಪುಗೊಂಡಿದೆ.
ವಾಯು ಮಾಲಿನ್ಯ ತಡೆಗೆ ದೆಹಲಿಯ ಆಪ್ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ನ್ಯಾಯಾಲಯದ ಸೂಚನೆ ಮೇರೆಗೆ ಜಾರಿಗೊಳಿಸುತ್ತಿದ್ದು, ಆಪ್ ಸರ್ಕಾರ ಒಂದು ವಾರದ ಲಾಕ್‌ಡೌನ್‌ಗೆ ಸಿದ್ಧ ಎಂದು ಹೇಳಿದ್ದರೆ ಕೇಂದ್ರ ಸರ್ಕಾರ ಅನಿವಾರ್ಯ ಎನಿಸಿದರೆ ಲಾಕ್‌ಡೌನ್ ಮಾಡೋಣ. ವಾಯು ಮಾಲಿನ್ಯ ತಡೆಯಲು ವಾಹನಗಳ ಸಂಚಾರ ನಿಯಂತ್ರಣ ಸೇರಿದಂತೆ ಮೂರು ಸೂತ್ರಗಳನ್ನು ನ್ಯಾಯಾಲಯದ ಮುಂದಿಟ್ಟಿದೆ.

ದೆಹಲಿ ವಾಯುಮಾಲಿನ್ಯ ತಗ್ಗಿಲು ಒಂದು ವಾರಗಳ ಲಾಕ್‌ಡೌನ್‌ಗೆ ಆಪ್ ಸರ್ಕಾರ ಸಿದ್ಧ
ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಆಪ್ ಸರ್ಕಾರ
ದೆಹಲಿ ವಾಯು ಮಾಲಿನ್ಯದ ಸಂಬಂಧ ನಾಳೆ ತುರ್ತು ಸಭೆ ಕರೆಯುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ತಾಕೀತು
ಕೃಷಿ ತ್ಯಾಜ್ಯ ಸುಡುವ ರೈತರ ಮೇಲೆ ಕ್ರಮ ಬೇಡ ಮನವೊಲಿಸಿ ಸುಪ್ರೀಂಕೋರ್ಟ್ ಸೂಚನೆ.
ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರದಿಂದ ಕೆಲ ಸೂತ್ರಗಳು ನ್ಯಾಯಾಲಯದ ಮುಂದೆ ಪರಿಸ್ಥಿತಿ ತೀರಾ ಕೆಟ್ಟರೆ ಮಾತ್ರ ಲಾಕ್‌ಡೌನ್ ಕೇಂದ್ರ ಸರ್ಕಾರ