ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆಗೆ ಚಾಲನೆ

ಬಾಗಲಕೋಟೆ,ನ.6 : ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವಾಯುವ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಗಿಡ ನೆಟ್ಟು, ನೀರುಣಿಸುವ ಮೂಲಕ ಚಾಲನೆ ನೀಡಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ಆವರಣದಲ್ಲಿ ಗುರುವಾರ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಾಯು ಮಾಲಿನ್ಯ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಕಲಬೆರಕೆ ಇಂಧನ ಮತ್ತು ಕಡಿಮೆ ಬೆಲೆಯ ಕಳಪೆ ಇಂಜಿನ್ ಆಯಿಲ್‍ಗಳನ್ನು ಬಳಸಬಾರದು. ಟ್ರಾಪಿಕ್ ಸಿಗ್ನಲ್‍ಗಳಲ್ಲಿ ಇಂಜಿನ್ ಬಂದ್ ಮಾಡಬೇಕು. ಏರ್ ಫಿಲ್ಟರ ಮತ್ತು ಸ್ಪಾರ್ಕ ಪ್ಲಗ್‍ಗಳನ್ನು ಸ್ವಚ್ಛವಾಗಿಡಬೇಕು ಎಂದು ತಿಳಿಸಿದರು.
ವಾಹದಿಂದ ದಟ್ಟವಾದ ಕಪ್ಪುಹೊಗೆ ಬರುತ್ತಿದ್ದರೆ ತಕ್ಷಣ ಸರ್ವಿಸ್ ಮಾಡಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ವಾಹನವನ್ನು ವಾಯು ಮಾಲಿನ್ಯ ತಪಾಸಣೆ ಮಾಡಿಸಬೇಕು. ಇದರಿಂದ ವಾಯು ಮಾಲಿನ್ಯ ತಡೆಯಬಹುದಾಗಿದೆ. ತಡೆಯದಿದ್ದಲ್ಲಿ ಗರ್ಭಿಣಿಯರಲ್ಲಿ ಗರ್ಭಶ್ರಾವ ಸಾದ್ಯತೆ, ಕಣ್ಣು ಮತ್ತು ದೃಷ್ಠಿ ಮಂಜಾಗುವಿಕೆ ಹಾಗೂ ಮೆದುಳಿನ ಕಾರ್ಯಾಚರಣೆಯಲ್ಲಿ ಕುಂಠಿತಗೊಳ್ಳಲಿದೆ. ಅಲ್ಲದೇ ಅಸ್ತಮಾ ಮತ್ತು ಉಸಿರಾಟದ ತೊಂದರೆಗಳು ಉಂಟಾಗುತ್ತಿದೆ. ಆದ್ದರಿಂದ ಪ್ರತಿ ಮನೆಗೊಂದು ಗಿಡ ನೆಡಬೇಕು. ವಾಯು ಮಾಲಿನ್ಯ ಪ್ರಮಾಣ ಪತ್ರ ಹೊಂದದೆ ಓಡಾಡುವುದು ಅಪರಾಧ. ಹಾಗೂ ದಂಡಸಹ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ರಾಜಶೇಖರ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದ್ದು, ದೆಹಲಿಯಂತಹ ದೊಡ್ಡ ನಗರಗಳಲ್ಲಿ ವಾಹನದ ಹೊಗೆ ಮತ್ತು ವೆಸ್ಟೇಜ್ ಸಾಮಗ್ರಿಗಳಿಂದ ಹೆಚ್ಚಾಗುತ್ತಿದೆ. ವಾಹನ ಪ್ಯಾರಾ ಮೀಟರ್ ಬಿಎಸ್-3, ಬಿಎಸ್-4 ವಾಹನಗಳನ್ನು ರದ್ದುಪಡಿಸಿ ಬಿಎಸ್-6 ವಾಹನಗಳನ್ನು ಚಾಲ್ತಿಯಲ್ಲಿಟ್ಟಿರುವದರಿಂದ ಮಾಲಿನ್ಯ ಹತೋಟಿಯಲ್ಲಿರುವುದಾಗಿ ತಿಳಿಸಿದರು. ಪೆಟ್ರೋಲ್, ಡಿಸೇಲ್ ಉತ್ಪಾದನಾ ಘಟಕಗಳಲ್ಲಿ ಲೆಡ್ ಬಳಕೆಯನ್ನು ಕಡಿಮೆಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಕುಂಬಾರ ಪ್ರಾರ್ಥನೆ ಗೀತೆ ಹಾಡಿದರು. ಪ್ರಾದೇಶಿಕ ಸಾರಿಗೆ ಇಲಾಖೆಯ ಶೀಘ್ರಲಿಪಿಗಾರ ನಾಗರಾಜ ಭದ್ರೆ ಕಾರ್ಯಕ್ರಮ ನಿರೂಪಿಸಿದರು.