ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನ ಮಾಲೀಕರ ಸಹಕಾರ ಅಗತ್ಯ : ಆರ್.ಟಿ.ಒ

ಬಳ್ಳಾರಿ,ನ.08: ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನ ಮಾಲೀಕರು ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಶೇಖರ್ ಅವರು ಹೇಳಿದರು.
ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ನಿಮಿತ್ತ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊವೀಡ್-19 ಹಿನ್ನೆಲೆ 3 ತಿಂಗಳ ಕಾಲ ದೇಶದ್ಯಾಂತ್ಯ ಲಾಕ್ಡೌನ್ ವಿಧಿಸಿದ್ದರಿಂದ ನೈಸರ್ಗಿಕವಾಗಿ ಉತ್ತಮ ವಾತವರಣ ಸೃಷ್ಠಿಯಾಗಿತ್ತು. ಆದರೆ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಉತ್ತಮ ಗಾಳಿ ನಮಗೆ ಲಭ್ಯವಾಗಬೇಕಿದ್ದಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದರು. ಏರ್ ಇಂಡಿಕ್ಸ್ ಅಂಕಪಟ್ಟಿಯಲ್ಲಿ ನಮ್ಮ ದೇಶವು 21ನೇ ಸ್ಥಾನದಲ್ಲಿದೆ. ಕೇವಲ ವಾಯು ಮಾಲಿನ್ಯ ಮಾತ್ರವಲ್ಲ, ಭೂಮಿ ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು. ವಾಹನಗಳು ಹೊರಗಡೆ ಬಿಡುವ ಹೊಗೆಯಲ್ಲಿ ವಿಷಅನಿಲಗಳಿರುತ್ತವೆ. ಸಾರ್ವಜನಿಕರ ಆರೋಗ್ಯ ಕಾಪಾಡಲು ತಮ್ಮ ವಾಹನಗಳನ್ನು ಪ್ರತಿ ಮಾಹೆಯಲ್ಲಿ ತಪಾಸಣೆ ಮಾಡಿಸಿಕೊಂಡು ಸುಸ್ಥಿತಿಯಲ್ಲಿಡಬೇಕು ಎಂದು ಹೇಳಿದ ಅವರು ವಾಹನ ಮಾಲೀಕರು ಮತ್ತು ಸಾರ್ವಜನಿಕರು ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಕರಿಸಬೇಕು ಎಂದರು.
ವಾಯುಮಾಲಿನ್ಯ ನಿಯಂತ್ರಣಾಧಿಕಾರಿ ಸೋಮಶೇಖರ ಅವರು ಮಾತನಾಡಿ, ಪ್ರತಿ ವರ್ಷ ವಾಯುಮಾಲಿನ್ಯದಿಂದ ಹೆಚ್ಚು ಜನ ಸಾಯುತ್ತಿದ್ದಾರೆ. ದಿಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ. ಈ ಚಳಿಗಾಲ ಸಮಯದಲ್ಲಿ ಹೆಚ್ಚು ಮಂಜು ಆವರಿಸಿ ಮುಂದೆ ಬರುವ ವಾಹನಗಳು ವಾಹನ ಚಾಲಕರಿಗೆ ಕಾಣದೇ ಹೆಚ್ಚು ಅಪಘಾತಕ್ಕೆಕ್ಕೀಡಾಗುತ್ತಿವೆ. ಈ ನಿಟ್ಟಿನಲ್ಲಿ ತಮ್ಮ ವಾಹನವನ್ನು ತಿಂಗಳಿಗೊಮ್ಮೆ ತಪಾಸಣೆ ನಡೆಸಿ ಉತ್ತಮ ಸುಸ್ಥಿತಿಯಲ್ಲಿಡಬೇಕು ಎಂದರು.
ಸಾರಿಗೆ ಇಲಾಖೆಯ ಹಿರಿಯ ಮೋಟರ್ ನಿರೀಕ್ಷಕರಾದ ಪಿ.ವೆಂಕಟರಮಣ ರೆಡ್ಡಿ ಅವರು ಮಾತನಾಡಿ, ಪೆಟ್ರೋಲ್, ಡೀಸೆಲ್ ಇಂಧನದಿಂದ ನೈಸರ್ಗಿಕ ಹಾನಿ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ನೈಸರ್ಗಿಕ ಅನಿಲ ಬಳಸುವಂತೆ ಸೂಚಿಸಿದೆ. ನೈಸರ್ಗಿಕ ಅನಿಲದಿಂದ ವಾಯುಮಾಲಿನ್ಯ ಆಗುವುದಿಲ್ಲ. ತಮ್ಮ ವಾಹನಗಳಿಗೆ ಕಲಬೆರಿಕೆ ಇಂಧನ, ಕಳಪೆ ಆಯಿಲ್ ಬಳಸಬೇಡಿ; ಇದರಿಂದ ಹೆಚ್ಚು ಹೊಗೆ ಉತ್ಪತಿಯಾಗಿ ವಾಯುಮಾಲಿನ್ಯ ಉಂಟಾಗತ್ತದೆ ಎಂದು ಹೇಳಿದರು.
ಪ್ರತಿ 6 ತಿಂಗಳಿಗೊಮ್ಮೆ ವಾಯುಮಾಲಿನ್ಯ ತಪಾಸಣೆಗೆ ಒಳಪಡಿಸಿ ವಾಯುಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.
ಸಾರಿಗೆ ಇಲಾಖೆಯ ಅಧೀಕ್ಷಕರಾದ ಗುಡಿಮನಿ ಅವರು ಸ್ವಾಗತಿಸಿದರು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ ಗಿರಿ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧೀಕ್ಷಕರಾದ ವಿರೇಶ್, ಮಂಜುನಾಥ, ಇಲಾಖೆಯ ಸಿಬ್ಬಂದಿ ಸೇರಿದಂತೆ ವಾಹನ ಮಾಲೀಕರು, ಸಾರ್ವಜನಿಕರು ಇದ್ದರು.