ವಾಯುಮಾಲಿನ್ಯ ನಿಯಂತ್ರಣಕ್ಕೆ ಚಾಲಕರ ಕೊಡುಗೆ ಅಪಾರ: ಆರ್‍ಟಿಒ ವಸಂತ್

ಹೊಸಪೇಟೆ ನ 06 : ಪರಿಸರ ವೈರಿಯಾದ ವಾಯು ಮಾಲಿನ್ಯ ನಿಯಂತ್ರಣಕ್ಕೆ ವಾಹನ ಮಾಲಿಕರ ಹಾಗೂ ಚಾಲಕರ ಪಾತ್ರ ಬಹಳ ಮಹತ್ವದಾಗಿದೆ. ಸರ್ವಸುರಕ್ಷತೆಯಿಂದ ಜಾಗೃತರಾಗಿ ವಾಹನವನ್ನು ಚಲಾಯಿಸಿ, ಮಾಲಿನ್ಯ ನಿಯಂತ್ರಣಕ್ಕೂ ಗಮನ ಹರಿಸಬೇಕು ಎಂದು ಆರ್‍ಟಿಒ ವಸಂತ್ ಚವ್ಹಾಣ್ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ವಾಯು ಮಾಲಿನ್ಯದಿಂದ ಆಸ್ತಮಾ, ಕಾನ್ಸರ್‍ನಂತಹ ಗಂಭೀರ ಸ್ವರೂಪದ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರಗಳ ವಾಹನ ಸವಾರರು ಸೀಟ್ ಬೆಲ್ಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಯುಮಾಲಿನ್ಯಕ್ಕೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿ ಪತ್ರಗಳನ್ನು ಯಾವಾಗಲೂ ಬಳಿಯಲ್ಲಿ ಇಟ್ಟುಕೊಂಡಿರಬೇಕು. ಪೊಲೀಸ್ ಹಾಗೂ ಆರ್‍ಟಿಒ ಅಧಿಕಾರಿಗಳು ಸಾರ್ವಜನಿಕರ ಹಿತರಕ್ಷಣೆ ಕೆಲಸ ಮಾಡುವುದರಿಂದ ಅವರಿಗೆ ಹೆದರುವ ಅವಶ್ಯತೆ ಇಲ್ಲ ಎಂದರು.
ಸ್ಥಳೀಯ ಮುಖಂಡರಾದ ಧರ್ಮೇಂದ್ರ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಆದ್ದರಿಂದ ಪರಿಸರ ಮಾಲಿನ್ಯ ಮಾಡದೇ ಜೀವನ ಸಾಗಿಸಬೇಕು ಎಂದರು.
ಜಾಗೃತಿ ಸಪ್ತಾಹದ ಅಂಗವಾಗಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಜಾಗೃತ ಕರಪತ್ರಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಘುನಾಥ, ಆರ್‍ಎಫ್‍ಒ ವಿನಯ್, ಮುನೀರ್ ಮೋಟರ್ಸ್ ಸಂಸ್ಥೆಯ ನಾಜಿಮುದ್ದಿನ್ ಶೇಖ್, ಮೋಟಾರ್‍ವಾಹನ ನಿರೀಕ್ಷಕರಾದ ಎಸ್.ಎಸ್.ಕುಮಾರ್, ವೈ.ಬಿ.ಮುತ್ತತ್ತಿ, ಎಸ್.ಎಂ.ಅಥೇಲ್, ಪ್ರದೀಪ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಇದ್ದರು.